ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆಯಲ್ಲಿ ಪುನರ್ ನಿರ್ಮಾಣಗೊಂಡು ಜ. 22ರಂದು ಉದ್ಘಾಟನೆಗೊಳ್ಳಲಿರುವ ಸಂತ ಪ್ಯಾಟ್ರಿಕ್ ಚರ್ಚಿಗೆ ಜ. 18 ರಂದು ಸಂಜೆ ವಿವಿಧ ಕಡೆಗಳಿಂದ ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಸ್ಥಳೀಯ ಚರ್ಚ್ ಮಾತ್ರವಲ್ಲದೆ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ, ಕೊರ್ಯಾರು ಶ್ರೀ ದುರ್ಗಾ ಮಹಮ್ಮಾಯಿ ದೇವಸ್ಥಾನ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನ, ಸಿದ್ದಕಟ್ಟೆ ವಲಯ ಬಂಟರ ಸಂಘ ಮತ್ತು ವಲಯ ಬಿಲ್ಲವರ ಸಂಘ, ರೋಟರಿ ಕ್ಲಬ್, ಮೈಕಲ್ ಮೊರಾಸ್ ಮೆಲ್ರಿಚ್ ಎಂಟರ್ ಪ್ರೈಸರ್ಸ್ , ಎಚ್ ಉಮ್ಮರ್ ಫಾರೂಕ್ ಮುಹಿಯುದ್ದೀನ್ ಜುಮ್ಮಾ ಮಸೀದಿ ಕೆರೆಬಳಿ, ಎಸ್ ಹಸನಬ್ಬ ಪುಚ್ಚೆಮೊಗರು ಮುಹಿಯುದ್ದೀನ್ ಜುಮ್ಮಾ ಮಸೀದಿ ಕೆರೆಬಳಿ ಹೀಗೆ ವಿವಿಧ ಕಡೆಗಳಿಂದ ಬಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಹೊಸ ಮೆರುಗು ನೀಡಿತು. ಗೊಂಬೆ ಕುಣಿತ, ಬ್ಯಾಂಡ್, ವಾದ್ಯ, ಕೊಂಬು, ನಾಸಿಕ್ ಬ್ಯಾಂಡ್ ಸಹಿತ ಸಮವಸ್ತ್ರ ಧಾರಿ ಮಹಿಳೆಯರು ಗಮನ ಸೆಳೆದರು.

ಧರ್ಮಗುರು ಡೇನಿಯಲ್ ಡಿಸೋಜ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್, ಪ್ರಮುಖರಾದ ಪಿಯೂಸ್ ಎಲ್. ರಾಡ್ರಿಗಸ್, ಇಲ್ಯಾಸ್ ಸ್ಯಾಂಕ್ಟೀಸ್, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ದಾರು ಸಲಾಂ ಜುಮಾ ಮಸೀದಿಯ ಅಧ್ಯಕ್ಷರಾದ ಸಿರಾಜ್, ಪೂಂಜ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಸಿದ್ದಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷರಾದ ಕಿರಣ್ ಕುಮಾರ್ ಮಂಜಿಲ, ರತ್ನಕುಮಾರ್ ಚೌಟ, ಸಮಿತಿ ಪದಾಧಿಕಾರಿಗಳಾದ ಪ್ರವೀಣ್ ಕ್ರಾಸ್ತ, ಜೆರಾಲ್ಡ್ ಡಿಕೋಸ್ತಾ, ಮೈಕಲ್ ಡಿಕೋಸ್ತಾ, ಉಲ್ಲಾಸ್ ಆಮ್ಯಾಲ್ ಸಿದ್ದಕಟ್ಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮೈಕಲ್ ಮೊರಾಸ್ ಮೆಲ್ರಿಚ್ ಎಂಟರ್ ಪ್ರೈಸರ್ಸ್ ಮಾಲಕರು ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಕುಟಿನ್ಹ ವಂದಿಸಿದರು.




