ಉಡುಪಿ: ಸ್ಕೂಟರ್ ಡೆಲಿವರಿ ಹೆಸರಿನಲ್ಲಿ ಯುವಕನೋರ್ವನಿಗೆ ಸಾವಿರಾರು ರೂ. ಆನ್‌ಲೈನ್ ಮೂಲಕ ವಂಚನೆ ನಡೆಸಿರುವ ಘಟನೆ ನಡೆದಿದೆ.

ಫೇಸ್‌ಬುಕ್‌ನಲ್ಲಿ ಮಾರ್ಕೆಟ್ ಪ್ಲೇಸ್ ಎಂಬ ಆಯ್ಕೆಯಲ್ಲಿ ನಿಟ್ಟೂರಿನ ಅಕ್ಕಸಾಲಿ ಶಶಿಧರ್(28) ಎಂಬವರು ವಿವಿಧ ಬಗೆಯ ಸ್ಕೂಟರ್ ಹಾಗೂ ಬೈಕ್‌ಗಳ ಚಿತ್ರಗಳನ್ನು ಗಮನಿಸಿದ್ದು ಅದರಲ್ಲಿ ಒಂದು ಸ್ಕೂಟರ್ ಚಿತ್ರದ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಪ್ ಲಿಂಕ್ ತೆರೆಯಿತು. ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ತನ್ನ ಹೆಸರು ಪ್ರದೀಪ್ ಕುಮಾರ್ ಎಂದು ಪರಿಚಯಿಸಿಕೊಂಡು ಸ್ಕೂಟರ್ ವಿಚಾರವಾಗಿ ಮಾತುಕತೆ ನಡೆಸಿದ್ದನು.

ಮಾತುಕತೆ ನಡೆಸಿದ ಪ್ರದೀಪ್ ಕುಮಾರ್ ಅವರು ಜ.6ರಂದು ಅಕ್ಕಸಾಲಿ ಶಶಿಧರ್ ಅವರನ್ನು ನಂಬಿಸಿ ದಾಖಲೆ ಸಿದ್ಧ ಪಡಿಸಲು 1950ರೂ. ಕಳುಹಿಸುವಂತೆ ತಿಳಿಸಿದ್ದರು. ಅದರಂತೆಯೇ ಅಕ್ಕಸಾಲಿ ಶಶಿಧರ್ ಅವರು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡದ್ದಾರೆ. ಬಳಿಕ ಡೆಲಿವರಿ ಚಾರ್ಜ್, ಜಿಪಿಎಸ್ ಚಾರ್ಜ್ ನೀಡಬೇಕೆಂದು ಹೇಳಿದಂತೆ ಶಶಿಧರ್ ಒಟ್ಟು 57,450ರೂ. ಹಣ ಪಾವತಿಸಿದ್ದಾರೆ. ಆದರೆ ಆರೋಪಿ ಇದುವರೆಗೂ ಸ್ಕೂಟರ್ ಡೆಲಿವೆರಿ ಮಾಡದೇ, ಹಣ ವಾಪಸ್ಸು ನೀಡದೇ ಆನ್‌ಲೈನ್‌ನಲ್ಲಿ ಮೋಸ ಮಾಡಿರುವುದಾಗಿ ದೂರಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




