Breaking
24 Jun 2026, Wed

ವಲಸೆ ಕಾರ್ಮಿಕನ ಮೇಲೆ ಹಲ್ಲೆ, ಕೊಲೆ ಯತ್ನ: ಮೂವರು ಆರೋಪಿಗಳ ಬಂಧನ

ಮಂಗಳೂರು: ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನೊಬ್ಬನನ್ನು ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಕಾವೂರು ಪೊಲೀಸರು ಜ. 12 ರಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ ಕೂಳೂರು ಗ್ರಾಮದ ನಿವಾಸಿಗಳಾದ ರತೀಶ್ ದಾಸ್ ಅಲಿಯಾಸ್ ಲಾಲು (32), ಧನುಷ್ (24) ಮತ್ತು ಸಾಗರ್ (24) ಎಂದು ಗುರುತಿಸಲಾಗಿದೆ.

ಜ. 11 ರಂದು ಸಂಜೆ ನಾಲ್ವರು ಆರೋಪಿಗಳು ಜಾರ್ಖಂಡ್‌ನ ವಲಸೆ ಕಾರ್ಮಿಕ ದಿಲ್ಜಾನ್ ಅನ್ಸಾರಿ ಅವರನ್ನು ತಡೆದು ಹಿಂದೂವೋ ಅಥವಾ ಮುಸ್ಲಿಮನೋ ಎಂದು ಪ್ರಶ್ನಿಸಿ ಕೋಮು ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಾಂಗ್ಲಾದೇಶಿ ಎಂದು ಆರೋಪಿಸಿ, ಅಶ್ಲೀಲವಾಗಿ ಬೈದು, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೆತ್ತಿಕೊಂಡ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *