Breaking
22 Mar 2026, Sun

ಕಾರ್ಕಳ ತಾಲೂಕಿನಲ್ಲಿ ಸರಣಿ ಗೋ ಕಳ್ಳತನ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆ ಆಗ್ರಹ

ಕಾರ್ಕಳ: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಗೋ ಕಳ್ಳತನ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಶಿರ್ಲಾಲು ಪರಿಸರದಲ್ಲಿ ರೈತರ ಮನೆಯ ಹಟ್ಟಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ ಗೋವುಗಳನ್ನು ಅಪಹರಿಸುತ್ತಿರುವುದು, ಕೆರ್ವಾಶೆ, ಬಜಗೋಳಿ ಹಾಗೂ ಹೊಸ್ಮಾರು ಭಾಗಗಳಲ್ಲಿ ಸತತವಾಗಿ ನಡೆಯುತ್ತಿರುವ ಜಾನುವಾರು ಕಳ್ಳತನದ ಬಗ್ಗೆ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಅಲ್ಲದೆ, ತೆಳ್ಳಾರು ಮತ್ತು ನಲ್ಲೂರು ಭಾಗಗಳಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯಾಚರಿಸುತ್ತಿದ್ದು, ಇತ್ತೀಚೆಗೆ ಗೋಮಾಂಸ ಪತ್ತೆಯಾದ ಪ್ರಕರಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ದುರ್ಗ ಮತ್ತು ಮುಂಡ್ಲಿ ಭಾಗದ ನದಿಗಳಲ್ಲಿ ಗೋವಿನ ಅವಶೇಷಗಳು ಪತ್ತೆಯಾಗಿರುವುದು ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಕಾರ್ಕಳದ ಬೈಲೂರು ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ವಿಷಯದಲ್ಲೂ ವ್ಯವಸ್ಥಿತವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಸಂಘಟನೆಗಳು ಆರೋಪಿಸಿವೆ. ಕಾನೂನಿನ ಮೇಲೆ ನಂಬಿಕೆ ಇಟ್ಟು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೂ, ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಒಂದು ವೇಳೆ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

Leave a Reply

Your email address will not be published. Required fields are marked *