Breaking
24 Jun 2026, Wed

ಮನೆಬಿಟ್ಟು ಉಡುಪಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ

ಉಡುಪಿ: ಮನನೊಂದು ಮನೆ ಬಿಟ್ಟು ಬಂದಿದ್ದ ಅಪ್ರಾಪ್ತೆಯನ್ನು ಉಡುಪಿಯ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಣೆ ಮಾಡಲಾಗಿದೆ.

ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ನಿಂತಿದ್ದಳು. ಈ ವೇಳೆ ಆದಿ ಉಡುಪಿಯ ನಿವಾಸಿಯಾಗಿರುವ ಪ್ರೇಮ ರಾಮಚಂದ್ರ ಎಂಬವರು ಆ ಕ್ಷೇತ್ರಕ್ಕೆ ದರ್ಶನಾರ್ಥಿಯಾಗಿ ಬಂದಿದ್ದು ಬಾಲಕಿಯೊಬ್ಬಳು ನಿಂತಿದ್ದು ಆಕೆಯ ಚಲನವಲನ ಕಂಡು ಸಂಶಯಗೊಂಡಿದ್ದಾರೆ. ಬಳಿಕ ಆಕೆಯನ್ನು ವಿಚಾರಿಸಿದಾಗ ತಾನು ಮನನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾಳೆ.

ಈ ವೇಳೆ ತಕ್ಷಣ ಪ್ರೇಮ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ನೆರವಿಗೆ ಬಂದ ಒಳಕಾಡು, ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಗೆ ದೊಡ್ಡಣಗುಡ್ಡೆಯ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಿದರು. ಕಾರ್ಯಾಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಸಹಕರಿಸಿದರು. ಬಾಲಕಿ ನಾಪತ್ತೆಯಾದ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಳೇಬೀಡು ಪೋಲಿಸರು ಬಾಲಕಿ ಉಡುಪಿಯಲ್ಲಿ ಪತ್ತೆಯಾಗಿರುವ ಮಾಹಿತಿ ತಿಳಿದು ಬಾಲಕಿಯ ತಾಯಿಯೊಂದಿಗೆ ಬಂದಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಳೇಬೀಡಿನ ಪೋಲಿಸರಿಗೆ ಬಾಲಕಿಯನ್ನು ಒಪ್ಪಿಸಿದರು. ಆದರೆ ತಾಯಿಯೊಂದಿಗೆ ತೆರಳಲು ಒಪ್ಪದ ಕಾರಣ ಬಾಲಕಿಗೆ ಚಿಕ್ಕಮಗಳೂರು ಬಾಲಕಿಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸುವ ಪ್ರಕ್ರಿಯೆ ಮುಂದುವರೆದಿದೆ.

Leave a Reply

Your email address will not be published. Required fields are marked *