Breaking
23 Mar 2026, Mon

ಬೆಂಗಳೂರಿನಲ್ಲಿ ಜ.3 ರಂದು ಸಾವನ್ನಪ್ಪಿದ ಮಂಗಳೂರು ಮೂಲದ ಮಹಿಳಾ ಟೆಕ್ಕಿಯ ಸಾವಿಗೆ ಬಿಗ್ ಟ್ಟಿಸ್ಟ್

ಬೆಂಗಳೂರು: ಜನವರಿ.5 ರಂದು ಬೆಂಗಳೂರಿನ ರಾಮಮೂರ್ತಿ ನಗರದ ಬೆಂಕಿ ಅವಘಡದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾದ ಮಂಗಳೂರು ಮೂಲದ ಮಹಿಳಾ ಟೆಕ್ಕಿಯ ಸಾವಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಆಕೆಯ ಸಾವಿಗೆ ಪ್ರೀತಿ ನಿರಾಕರಣೆಯೇ ಕಾರಣ ಅನ್ನುವ ವಿಚಾರ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಮಂಗಳೂರಿನ ಶರ್ಮಿಳಾ (34) ಕೊಲೆಯಾದ ಮಹಿಳೆಯಾಗಿದ್ದು, ಕೇರಳ ಮೂಲದ ಯುವಕ ಕರ್ನಲ್‌ (18) ಎಂಬಾತ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.

ಶರ್ಮಿಳಾ ಮೂಲತಃ ಮಂಗಳೂರಿನವರಾಗಿದ್ದು ಕೆಲವು ಒಂದು ವರ್ಷದ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಅಕ್ಸೆಂಚರ್ ಸಾಫ್ಟ್ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದರು. ಜನವರಿ 3ರ ರಾತ್ರಿ ಈ ಘಟನೆ ನಡೆದಿದ್ದು, ಜ.5ರಂದು ಬೆಳಕಿಗೆ ಬಂದಿದೆ. ಘಟನೆ ನಡೆದ ದಿನ ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ವಾಸಿಸುತ್ತಿದ್ದ ಫ್ಲ್ಯಾಟ್ನ ರೂಮ್ನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿತ್ತು.

ಇದನ್ನ ನೋಡಿದ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ರೂಮಿನಿಂದ ಹೊರಬರಲಾಗದೇ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದರು.

ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯಾರಾದರೂ ಮನೆಗೆ ಬಂದು ಹೋಗಿರಬಹುದಾ ಅನ್ನುವ ಅನುಮಾನ ವ್ಯಕ್ತವಾಗಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಕಂಡ ಯುವಕ ಕರ್ನಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ಈ ವೇಳೆ ಇದು ಆಕಸ್ಮಿಕ ಸಾವಲ್ಲ. ಕೊಲೆ ಎಂಬುದು ಗೊತ್ತಾಗಿದೆ.

ಶರ್ಮಿಳಾ ಹಾಗೂ ಆರೋಪಿ ಕರ್ನಲ್ ಅಕ್ಕಪಕ್ಕದ ನಿವಾಸಿಗಳಾಗಿದ್ದು ಸಾಮಾನ್ಯವಾಗಿ ಇಬ್ಬರು ಎದುರು ಬದುರು ಆದಾಗ ಸ್ಮೈಲ್ ಕೊಟ್ಟು ಮಾತನಾಡಿಸುತ್ತಿದ್ದಳು. ಇದನ್ನೇ ಪ್ರೀತಿ ಎಂದುಕೊಂಡಿದ್ದ ಆರೋಪಿ ಆಕೆಯನ್ನು ನಿಜವಾಗಿಯೂ ಪ್ರೀತಿಸಲು ಆರಂಭಿಸಿದ್ದ. ಘಟನೆ ನಡೆದ ದಿನ ರಾತ್ರಿ ಶರ್ಮಿಳಾ ಮನೆಗೆ ಏಕಾಏಕಿ ಹಿಂದಿನಿಂದ ತಬ್ಬಿಕೊಂಡಿದ್ದ. ಗಾಬರಿಯಾದ ಶರ್ಮಿಳಾ ಆತನನ್ನು ತಳ್ಳಿ, ಬೈದಿದ್ದಳು. ಇದರಿಂದ ಕೋಪಗೊಂಡ ಆರೋಪಿ ಹಲ್ಲೆ ಮಾಡಿ, ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಅದೇ ಗಾಬರಿಯಲ್ಲಿ ತಲೆದಿಂಬಿಗೆ ಬೆಂಕಿ ಹಚ್ಚಿ, ಅಲ್ಲಿಂದ ಎಸ್ಕೇಪ್ ಆಗಿದ್ದ ಎಂದು ತಿಳಿದುಬಂದಿದೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *