Breaking
26 Sep 2026, Sat

ಪಟ್ಟಣ ಹಾಗೂ ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶ

ಬೆಳ್ತಂಗಡಿ: ನಗರದ ಮಂಜುನಾಥ ಕಲಾ ಭವನದ ಪಿನಾಕಿ ಸಭಾಂಗಣದಲ್ಲಿ ಪಟ್ಟಣ ಹಾಗೂ ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶವು ಡಿ. 11 ರಂದು ನಡೆಯಿತು.

ಈ ಸಮಾವೇಶದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಪೌರ ಕಾರ್ಮಿಕರ ಸಂಘದ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಹಿರಿಯ ದಲಿತ ಮುಖಂಡ ಎಸ್.ಪಿ ಆನಂದ ಅವರು ನಗರ , ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಪೌರ ಕಾರ್ಮಿಕರು ತಮ್ಮ ಸಂವಿಧಾನಬದ್ಧ ಹಕ್ಕುಗಳಿಗೆ , ಪೌರ ಕಾರ್ಮಿಕರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಬೆಳ್ತಂಗಡಿಯಲ್ಲಿ ಪಟ್ಟಣ ಮತ್ತು ಗ್ರಾಮ ಪಂಚಾಯತ್ ಪೌರ ಕಾರ್ಮಿಕರ ಜಂಟಿ ಸಮಾವೇಶ ನಡೆದಿದೆ‌. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಸಂಘಟನೆ ವಿಸ್ತರಿಸಲಾಗುವುದು ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಲಾಗುತ್ತಿದೆ , ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿ ಕನಿಷ್ಠ ವೇತನ ನೀಡದೆ ದುಡಿಸುತ್ತಿರುವುದು ಅಪರಾಧವಾಗಿದೆ. ಪೌರ ಕಾರ್ಮಿಕರ ಶ್ರಮದ ಪ್ರತಿಫಲ ಸಂಜೀವಿನಿ ಒಕ್ಕೂಟ ಮತ್ತು ಅಧಿಕಾರಿಗಳ ಪಾಲಗುತ್ತಿರುವುದು ದುರಂತ. ಸ್ವಚ್ಚತಾ ಕಾರ್ಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳು ಪೌರ ಕಾರ್ಮಿಕರಿಗೆ ಸಲ್ಲಬೇಕು ಎಂದರು.

ಮಹಿಳೆ , ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದ ಅವರು ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ತಕ್ಷಣ ಖಾಯಂಗೊಳಿಸಲು ಒತ್ತಾಯಿಸಿ ಸದ್ಯದಲ್ಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಹೋರಾಟ ನಡೆಸಲಾಗುತ್ತದೆ ಎಂದರು.

ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಸಂಜೀವಿನಿ ಒಕ್ಕೂಟ ಬೇಡ , ನೇರ ಪಾವತಿಯಾಗಬೇಕು. ಅಧಿಕಾರಿಗಳು , ಜನಪ್ರತಿನಿಧಿಗಳು ನಡೆಸುವ ದೌರ್ಜನ್ಯಗಳು , ಕಡಿಮೆ ವೇತನ , ವೇತನ ತಾರತಮ್ಯ , ವಾರದಲ್ಲಿ 2-3 ದಿನ ಕೆಲಸ , ಕಾನೂನುಬದ್ಧ ಸವಲತ್ತುಗಳ ನಿರಾಕರಣೆ ಮೊದಲಾದ ಸಮಸ್ಯೆಗಳ ಬಗ್ಗೆ ಮಾತನಾಡಿದರು .

ಸ್ವಚ್ಚತಾ ವಾಹನ ಚಾಲಕ ಸಂಘದ ದ.ಕ ಜಿಲ್ಲಾಧ್ಯಕ್ಷ ವರುಣ್ ಮಾತನಾಡಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಂಘಟಿತರಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ 600 ಪೌರ ಕಾರ್ಮಿಕರನ್ನು ಖಾಯಂ ‌ಮಾಡಲಾಗಿದೆ ಇದು ಸಂಘಟನೆಯ ಹೋರಾಟದ ಫಲವಾಗಿದೆ ಎಂದರು.

ವೇದಿಕೆಯಲ್ಲಿ ಪೌರ ಕಾರ್ಮಿಕ ಸಂಘದ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಚಂದ್ರ ಬೋವಿ , ಜತೆ ಕಾರ್ಯದರ್ಶಿ ಸುರೇಶ್ ಕೆ ಅರಳಿ , ಗ್ರಾಮ ಪಂಚಾಯತ್ ಸ್ವಚ್ಚತಾ ಕಾರ್ಮಿಕರ ಸಂಘದ ಅಧ್ಯಕ್ಷೆ ರೇಣುಕಾ ಕುಕ್ಕೇಡಿ , ಕಾರ್ಯದರ್ಶಿ ಸುಮತಿ ವೇಣೂರು ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ ನಮ್ಮೆಲ್ಲರ ನಡುವಿನ ಭೇದಭಾವಗಳನ್ನು ಮರೆತು ನಮ್ಮೆಲ್ಲರ ಹಕ್ಕುಗಳಿಗಾಗಿ , ನಮ್ಮ ಮೇಲೆ ನಡೆಯುವ ವಿವಿಧ ರೀತಿಯ ದಬ್ಬಾಳಿಕೆಯ ವಿರುದ್ಧ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದರು.

ಮೊದಲಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ವಚ್ಚತಾ ವಾಹನದ ಚಾಲಕ ಶಿವಕುಮಾರ್ ಸ್ವಾಗತಿಸಿ ಶೇಖರ್ ಲಾಯಿಲ ಕಾರ್ಯಕ್ರಮ ನಿರೂಪಿಸಿ , ಧನ್ಯವಾದವಿತ್ತರು.

Leave a Reply

Your email address will not be published. Required fields are marked *