Breaking
22 Mar 2026, Sun

ಪರಶುರಾಮ್ ಥೀಮ್ ಪಾರ್ಕ್ ನ ತಾಮ್ರದ ಹೊದಿಕೆ ಕಳವು: ಇಬ್ಬರ ಬಂಧನ

ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದಲ್ಲಿರುವ ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಟಾವಣಿಗೆ ಅಳವಡಿಸಿದ್ದ ತಾಮ್ರದ ಹೊದಿಕೆ ಕಳವು ಮಾಡಿದ ಇಬ್ಬರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಎಂದು ಗುರುತಿಸಲಾಗಿದೆ.

ಜ.3ರಂದು ಪಾರ್ಕ್‌ ನ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಮೇಲ್ಛಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳವು ಮಾಡಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸ್‌ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 45,000 ರೂ. ಮೌಲ್ಯದ 51 ಕೆಜಿ ತಾಮ್ರದ ಹೊದಿಕೆ, 2 ಸಿಲಿಂಗ್ ಫ್ಯಾನ್, ಕೃತ್ಯಕ್ಕೆ ಬಳಸಿದ ಗೂಡ್ಸ್‌ ಅಟೋರಿಕ್ಷಾ, ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಆರೀಫ್ ವಿರುದ್ಧ 9 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಹಮೀದ್ ವಿರುದ್ಧ ಬಜಪೆ ಹಾಗೂ ಮೂಡುಬಿದಿರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

Leave a Reply

Your email address will not be published. Required fields are marked *