ಬಂಟ್ವಾಳ: ನಮ್ಮಪಾಲು ನಮ್ಮ ಹಕ್ಕು’ ಎಂಬ ಧ್ಯೇಯ ವಾಕ್ಯದಡಿ ಯುವಜನತೆ ಒಟ್ಟುಗೂಡಿಸಿ ಅವರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಭೀಮ್ ಆರ್ಮಿ’ ಯೋಜನೆಯು ಜಿಲ್ಲಾ ಮಟ್ಟದಲ್ಲಿ ರಚನೆಯಾಗಲಿದ್ದು, ಅಂಬೇಡ್ಕರ್ ಭವನದಲ್ಲಿ ಜ.11ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಬಿ.ಸಿ.ರೋಡ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೋರಾಟಗಾರ ರಾಜಾ ಚೆಂಡ್ತಿಮಾರ್ ಹೇಳಿದ್ದಾರೆ.

ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗದೆ ದೇಶದಲ್ಲಿ ಸ್ವಾತಂತ್ರ್ಯ ದೊರೆತು ಸುಮಾರು 75 ವರ್ಷ ಕಳೆದರೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸಮಾನ ರೀತಿಯ ಶಿಕ್ಷಣ ಮತ್ತು ಉದ್ಯೋಗ ಇನ್ನೂ ಸಿಕ್ಕಿಲ್ಲ.
ನಿನ್ನೆ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ರಾಜ್ಯ ಸಂಘಟನೆ ಅಧ್ಯಕ್ಷ ರಾಜ್ ಗೋಪಾಲ್ ಡಿ.ಎಸ್.ಅಧ್ಯಕ್ಷತೆ ವಹಿಸಲಿದ್ದು, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ ನಾಯಕ್ ಸಂಘ ಉದ್ಘಾಟಿಸುವರು ಎಂದರು.

ಸರ್ಕಾರ ಘೋಷಿಸುತ್ತಿರುವ ವಿವಿಧ ಮೀಸಲಾತಿ ಯೋಜನೆಗಳು ದುರುಪಯೋಗದಿಂದ ಅನರ್ಹರ ಪಾಲಾಗುತ್ತಿದೆ. ಪರಿಶಿಷ್ಟ ಸಮುದಾಯದ ಸಾವಿರಾರು ಮಂದಿ ಪದವೀಧರರು ಇದ್ದರೂ ಅವರಿಗೆ ದುಡಿಯಲು ಸೂಕ್ತ ಉದ್ಯೋಗ ಸಿಗುತ್ತಿಲ್ಲ.

ಸರ್ಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಕುಂದು ಕೊರತೆ ಸಭೆ ನಡೆಸುತ್ತಿದ್ದು, ರಾಜಕೀಯ, ಸಹಕಾರಿ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಈಗಲೂ ಅಸ್ಪೃಷ್ಯತೆ ಪಿಡುಗು ಕಾಡುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ ಸುಂದರ್ ನಿಡ್ಪಳ್ಳಿ, ಗಣೇಶ ಕಾಯರ್ ಮಾರ್, ಸಂತೋಷ್ ಭಂಡಾರಿಬೆಟ್ಟು, ನಾರಾಯಣ ಭಂಡಾರಿಬೆಟ್ಟು, ಕೊರಗಪ್ಪ ಕೊಯಿಲ ಮುಂತಾದವರು ಇಲ್ಲೋ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

