Breaking
24 Jun 2026, Wed

ಕಲ್ಲಡ್ಕ ಮಾದರಿ ಶಾಲೆ ಯ ಇಕೋ ಕ್ಲಬ್ ಮಕ್ಕಳಿಂದ ತರಕಾರಿ ಕೃಷಿ ಚಟುವಟಿಕೆಯ ಮೊದಲ ಕೊಯ್ಲು

ಬಂಟ್ವಾಳ: ತಾಲೂಕಿನ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಇಕೋ ಕ್ಲಬ್ ವತಿಯಿಂದ ಶಾಲಾ ಶಿಕ್ಷಕಿ ತೇಜಾಕ್ಷಿ ನೇತೃತ್ವದಲ್ಲಿ ಮಕ್ಕಳು ನಡೆಸಿದ ತರಕಾರಿ ಕೃಷಿ ಚಟುವಟಿಕೆಗಳ ಪ್ರಥಮ ಕೊಯ್ಲು ಜನವರಿ.9 ರಂದು ನಡೆಯಿತು.

ಈ ವೇಳೆ ಪ್ರಗತಿಪರ ಕೃಷಿಕ ರಾಮಣ್ಣ ಸಪಲ್ಯ ನಾವೂರ ಕಾರಿಂಜರವರು ವಿದ್ಯಾರ್ಥಿಗಳಿಗೆ ತರಕಾರಿಗಳನ್ನು ಬೆಳೆಸುವ ವಿಧಾನಗಳು, ರೋಗ ಬರದಂತೆ ನಿಯಂತ್ರಣ ಕ್ರಮಗಳು, ವಾತಾವರಣಕ್ಕೆ ಅನುಗುಣವಾಗಿ ಬೆಳೆಸುವ ರೀತಿ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುವುದರ ಮೂಲಕ ತಮ್ಮ ಮನೆಯ ಪರಿಸರದಲ್ಲಿದ್ದ ಜಾಗದಲ್ಲಿ ತರಕಾರಿ ಕೃಷಿ ಮಾಡುವ ಬಗ್ಗೆ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಪ್ರಾಯೋಗಿಕವಾಗಿ ಮಾರ್ಗದರ್ಶನ ಮಾಡುವ ಮೂಲಕ ತಿಳಿಸಿಕೊಟ್ಟರು.

ಇದೇ ವೇಳೆ ಮಕ್ಕಳು ಶಿಕ್ಷಣದ ಜೊತೆಗೆ ತಾವು ಬೆಳೆಸಿದ ತರಕಾರಿಗಳ ಮೊದಲ ಕೊಯ್ಲನ್ನು ಮಾಡಿ ಸಂಭ್ರಮಿಸಿದರು.

ಪ್ರಸ್ತುತ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ 8ನೇ ತರಗತಿ ತನಕ 912 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿನ ಇಕೋ ಕ್ಲಬ್ಬಿನ ಮಕ್ಕಳು ಈ ವರ್ಷ ಗೋಣಿ ಚೀಲದಲ್ಲಿ ಸುಮಾರು 75 ಬದನೆ ಗಿಡಗಳನ್ನು ನೆಟ್ಟಿದ್ದು, ಜೊತೆಗೆ ಬಸಲೆ, ತೊಂಡೆಕಾಯಿ, ಬಾಳೆ ಗಿಡ ಮೊದಲಾದವುಗಳನ್ನು ನೆಟ್ಟಿದ್ದು ಕೊಯ್ಲು ಹಂತಕ್ಕೆ ಬಂದಿದ್ದು ಶಾಲೆಯ ಬಿಸಿ ಊಟಕ್ಕೆ ಬಳಸಲಾಯಿತು.

ಈ ಸಂದರ್ಭ ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್, ಶಾಲಾ ಶಿಕ್ಷಕ ವೃಂದ, ಇಕೋ ಕ್ಲಬ್ ಮಕ್ಕಳು, ಶಾಲಾ ಸಿಬ್ಬಂದಿ ವರ್ಗ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *