Breaking
23 Mar 2026, Mon

ವಾಹನ ಕಳವು ಪ್ರಕರಣ: ವಿಮೆ ಕ್ಲೈಮ್ ನಿರಾಕರಣೆ, ಪರಿಹಾರ ನೀಡಲು ವಿಮಾ ಕಂಪನಿಗೆ ಗ್ರಾಹಕರ ನ್ಯಾಯಾಲಯ ಆದೇಶ

ಮಂಗಳೂರು: ವಾಹನದ ಕಳವು ಸಂದರ್ಭದಲ್ಲಿ ವಾಹನಕ್ಕೆ ಸೂಕ್ತ ವಿಮೆ ಇದ್ದರೂ ಸಕಾರಣವಿಲ್ಲದೆ ವಿಮಾ ಮೊತ್ತ ನಿರಾಕರಿಸಿದ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪೆನಿ ವಿರುದ್ದ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಚಾಟಿ ಬೀಸಿದ್ದು ವಾಹನದ ಮೌಲ್ಯವೂ ಸೇರಿದಂತೆ 20,000 ರೂಪಾಯಿ ದಂಡ, 10,000 ರೂಪಾಯಿ ಕೋರ್ಟ್ ಖರ್ಚು ಮತ್ತು ಇದಕ್ಕೆ ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

ಮಂಗಳೂರಿನ ಶ್ರೀ ಸಾಂತಪ್ಪ ಯು ಎಂಬವರು ಗೂಡ್ಸ್ ಟೆಂಪೋ ವಾಹನ ಸಂಖ್ಯೆ KA 19AD 3058 ರ ಮಾಲಿಕರಾಗಿದ್ದು 26 ಡಿ. 2023 ರಂದು ಸಂಜೆ ಕೆಲಸ ಮುಗಿಸಿ ಪಡೀಲ್ ಎಂಬಲ್ಲಿ ಈ ವಾಹನ ನಿಲುಗಡೆಗೊಳಿಸಿದ್ದರು. ಮರುದಿನ ಬೆಳಿಗ್ಗೆ ಬಂದು ನೋಡಿದಾಗ ವಾಹನ ಕಳವಾಗಿದ್ದು, ಅದಕ್ಕಾಗಿ ತೀವ್ರ ಹುಡುಕಾಟ ಮತ್ತು ಪೋಲಿಸರಿಗೆ ದೂರು ಕೊಟ್ಟಿದ್ದರೂ ಸಹ ವಾಹನ ಪತ್ತೆಯಾಗಿರಲಿಲ್ಲ.

ಈ ಬಗ್ಗೆ ಸದ್ರಿ ವಾಹನದ ವಿಮಾಕಂಪೆನಿಗೆ ವಾಹನದ ವಿಮೆಯ ಮೊತ್ತವನ್ನು ಪಾವತಿಸುವಂತೆ ಎಲ್ಲಾ ದಾಖಲೆಗಳೊಂದಿಗೆಕ್ಲೈಮ್ ಸಲ್ಲಿಸಿದ್ದರೂ ವಿಮಾ ಕಂಪೆನಿಯವರು ನಿಲ್ಲಿಸಿದ ವಾಹನಕ್ಕೆ ಫಿಟ್ನೆಸ್ಸ್ ಇಲ್ಲ ಎಂಬ ಅನಗತ್ಯ ಕಾರಣವೊಡ್ಡಿ ಕ್ಲೈಮ್ ನಿರಾಕರಿಸಿದ್ದು ಸಂಸ್ಥೆ ವಿರುದ್ದ ವಾಹನ ಮಾಲೀಕರು ಸಲ್ಲಿಸಿದ ದೂರನ್ನು ಕೂಲಂಕುಶವಾಗಿ ಪರಿಶೀಲಿಸಿದ ಮಾನ್ಯ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಳವಿನ ಸಂದರ್ಭದಲ್ಲಿ ವಾಹನವನ್ನು ದೈನಂದಿನ ಚಟುವಟಿಕೆಯ ನಂತರ ನಿಲುಗಡೆ ಮಾಡಿದ್ದು ಅದು ಚಾಲನೆಯ ಸ್ಥಿತಿಯಲ್ಲಿ ಇರಲಿಲ್ಲ . ಆದ್ದರಿಂದ ಆಗ ಫಿಟ್ನೆಸ್ಸ್ ಸರ್ಟಿಫಿಕೇಟ್ ಪ್ರಸ್ತುತ ಮತ್ತು ಕಳವಿಗೂ ಕ್ಲೈಮ್ ನಿರಾಕರಣೆಗೆ ನೀಡಿರುವ ಕಾರಣಕ್ಕೂ ಯಾವುದೇ ಸಂಬಂಧವಿಲ್ಲ . ವಿಮಾ ಕಂಪೆನಿಯವರಿಂದ ಸದ್ರಿ ವಾಹನ ಮಾಲಿಕರಿಗೆ ಸೇವಾ ನ್ಯೂನತೆ ಆಗಿರುತ್ತದೆ. ಈ ಕಾರಣಕ್ಕಾಗಿ ಸದ್ರಿ ವಾಹನದ ಮೌಲ್ಯದ ಜೊತೆಗೆ 20,000 ರೂಪಾಯಿ ದಂಡ, 10,000 ರೂಪಾಯಿ ಕೋರ್ಟ್ ಖರ್ಚು ಮತ್ತು ಬಡ್ಡಿ ಶೇ. 6% ರಂತೆ ಪಾವತಿಸುವಂತೆ ಕೋರ್ಟ್ ವಿಮಾ ಕಂಪೆನಿಗೆ ಆದೇಶಿಸಿದೆ.
ನ್ಯಾಯವಾದಿ ಶ್ರೀ ಅನಿಲ್ ಕುಮಾರ್ ಕೆ. ಇವರು ಗ್ರಾಹಕರ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *