Breaking
22 Mar 2026, Sun

ಕುಕ್ಕಾಜೆಯಲ್ಲಿ 50ನೇ ವರ್ಷದ ಅಯ್ಯಪ್ಪ ದೀಪೋತ್ಸವ ಸಂಭ್ರಮ

ಬಂಟ್ವಾಳ: ಕುಕ್ಕಾಜೆ ಅಯ್ಯಪ್ಪ ಭಕ್ತ ವೃಂದ ಮತ್ತು ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರ ಹಾಗೂ ಅಯ್ಯಪ್ಪ ದೀಪೋತ್ಸವ ಸಮಿತಿ ವತಿಯಿಂದ 50ನೇ ವರ್ಷಾಚರಣೆ ಪ್ರಯುಕ್ತ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮವು ಡಿ. 28 ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಗುರುಸ್ವಾಮಿ ಉದಯ ಮಂಜೇಶ್ವರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಹಿರಿಯ ಗುರುಸ್ವಾಮಿ ಉದಯ ಮಂಜೇಶ್ವರ ಅವರು ದುಶ್ಚಟಮುಕ್ತನಾಗಿ 48 ದಿನಗಳ ಕಠಿಣ ವೃತಾಚರಣೆ ಬಳಿಕ ಇರುಮುಡಿ ಹೊತ್ತು ಶಬರಿಮಲೆ ಸನ್ನಿಧಾನಕ್ಕೆ ತೆರಳುವ ವೃತಾಧಾರಿಗಳು ಮತ್ತು ಗುರುಸ್ವಾಮಿ ಪರಸ್ಪರ ತಾಯಿ-ಮಗುವಿನ ಬಾಂಧವ್ಯ ಬೆಳೆಸಿಕೊಳ್ಳಬೇಕು. ಅದೇ ರೀತಿ ದೇವರ ಪೂಜೆ ಅಥವಾ ಕೆಂಡಸೇವೆ ಸಂದರ್ಭದಲ್ಲಿ ಮೈಮೇಲೆ ಆವೇಶ ಬರುವುದು ಸೇರಿದಂತೆ ಮೂಢನಂಬಿಕೆಗೆ ಬದಲಾಗಿ ಸನಾತನ ಧರ್ಮದ ಮೂಲನಂಬಿಕೆ ಉಳಿಸಿಕೊಳ್ಳಬೇಕು ಎಂದರು.

ದೀಪೋತ್ಸವ ಸಮಿತಿ ಅಧ್ಯಕ್ಷ ಮಾಧವ ಎಸ್.ಮಾವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಕ್ಕಾಜೆ ಪರಿಸರದಲ್ಲಿ ಧಾರ್ಮಿಕ ನಂಬಿಕೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದರು.

ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು, ಬಿಜೆಪಿ ಮುಖಂಡ ವಿಕಾಸ್ ಪುತ್ತೂರು, ನಿವೃತ್ತ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಕೋಮಾಲಿ ಶುಭ ಹಾರೈಸಿದರು.

ಗುರುಸ್ವಾಮಿ ಸದಾಶಿವ ಆಚಾರ್ಯ ಕುಕ್ಕಾಜೆ, ಪ್ರಮುಖರಾದ ಗಣೇಶ ಐತಾಳ್ ಚೌಕದಪಾಲು, ಸತೀಶ ಆಳ್ವ ಬಾಳಿಕೆ, ಬಾಲಕೃಷ್ಣ ಅಡ್ಯಂತಾಯ, ಕೃಷ್ಣಪ್ಪ ಬೆಳ್ಚಡ ಚೌಕದಪಾಲು, ರವೀಂದ್ರ ಶೆಟ್ಟಿ ಕುಕ್ಕಾಜೆ, ಸಮಿತಿ ಅಧ್ಯಕ್ಷ ಮಾಧವ ಎಸ್.ಮಾವೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕೇಶವ ರಾವ ನೂಜಿಪ್ಪಾಡಿ ಸ್ವಾಗತಿಸಿ, ಪುಷ್ಪರಾಜ್ ಕುಕ್ಕಾಜೆ ಪ್ರಾಸ್ತಾವಿಕ ಮಾತನಾಡಿದರು. ಸಂಜೀವ ಆಚಾರ್ಯ ಕುಕ್ಕಾಜೆ ವಂದಿಸಿದರು. ರಮೇಶ ರಾವ್ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಶಾಸಕರಾದ ರಾಜೇಶ ನಾಯ್ಕ್ ಉಳಿಪಾಡಿ, ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಸತೀಶ ಕುಂಪಲ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಧಾರ್ಮಿಕ ಮುಖಂಡ ಸಂದೇಶ ಶೆಟ್ಟಿ ಅರೆಬೆಟ್ಟು ಭೇಟಿ ನೀಡಿದರು.

ಯಕ್ಷಗಾನ ಬಯಲಾಟ, ಕೆಂಡಸೇವೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Leave a Reply

Your email address will not be published. Required fields are marked *