Breaking
22 Mar 2026, Sun

ಕುಡಾಳಿ–ಮಾಲವಾಣಿ ಕೊಂಕಣಿ–ಕನ್ನಡ–ಇಂಗ್ಲಿಷ್ ಯ ಶಬ್ದಕೋಶ ಬಿಡುಗಡೆ ಭಾಷೆಯ ಜೀವಂತಿಕೆ ಶಬ್ದಗಳಲ್ಲಿ ಅಡಗಿದೆ: ಪ್ರಭಾಕರ್ ಜೋಶಿ

ಮಂಗಳೂರು: ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳಿ–ಮಾಲವಾಣಿ ಕೊಂಕಣಿ–ಕನ್ನಡ–ಇಂಗ್ಲಿಷ್ ಶಬ್ದಕೋಶ ಬಿಡುಗಡೆ ಸಮಾರಂಭ, 28ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಡಿ. 21 ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕುಡಾಳಿ–ಮಾಲವಾಣಿ ಕೊಂಕಣಿ–ಕನ್ನಡ–ಇಂಗ್ಲಿಷ್ ಶಬ್ದಕೋಶವನ್ನು ಹಿರಿಯ ಚಿಂತಕ ಹಾಗೂ ವಿದ್ವಾಂಸರಾದ ಶ್ರೀ ಪ್ರಭಾಕರ್ ಜೋಶಿ ಅವರು ಬಿಡುಗಡೆಗೊಳಿಸಿ ಬಳಿಕ ಮಾತನಾಡಿದ ಅವರು, “ಭಾಷೆಯ ಉಳಿವು ಶಬ್ದಗಳಲ್ಲಿ ಅಡಗಿದೆ. ನಿಘಂಟುಗಳು ಕೇವಲ ಪದಗಳ ಸಂಗ್ರಹವಲ್ಲ; ಅವು ಭಾಷೆಯ ಸಾಂಸ್ಕೃತಿಕ ಸ್ಮೃತಿಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸೇತುವೆಗಳಾಗಿವೆ. ಕೊಂಕಣಿ ಭಾಷೆಯಂತಹ ಶ್ರೀಮಂತ ಭಾಷೆಗೆ ಇಂತಹ ಅರ್ಥಗರ್ಭಿತ, ವೈಜ್ಞಾನಿಕ ಶಬ್ದಕೋಶಗಳು ಅತ್ಯಂತ ಅಗತ್ಯ” ಎಂದರು. ಇಂದಿನ ಪೀಳಿಗೆಯಲ್ಲಿ ಮಾತೃಭಾಷೆಯಲ್ಲಿ ಮಾತನಾಡುವಾಗ ಉಂಟಾಗುವ ಜಿಜ್ಞಾಸೆ ಹಾಗೂ ಸಂಶಯಗಳಿಗೆ ಇಂತಹ ಬಹುಭಾಷಾ ಶಬ್ದಕೋಶಗಳು ಮಾರ್ಗದರ್ಶಿಯಾಗುತ್ತವೆ. ಭಾಷೆ, ಶಿಕ್ಷಣ ಮತ್ತು ಸಾಹಿತ್ಯದ ಬೆಳವಣಿಗೆಗೆ ಈ ನಿಘಂಟು ಮಹತ್ವದ ಕೊಡುಗೆಯಾಗಿದೆ ಎಂದು ಶ್ಲಾಘಿಸಿ, ಇದನ್ನು ಪ್ರಕಟಿಸಿದ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವನ್ನು ಅಭಿನಂದಿಸಿದರು. ಜೊತೆಗೆ ಶಬ್ದಕೋಶದ ಸಂಪಾದಕರಾದ ಹಿರಿಯ ಲೇಖಕ ಶ್ರೀ ಎಸ್. ಸಂಜೀವ ಪಾಟೀಲ್, ಸರಳೆಬೆಟ್ಟು ಅವರ ಭಾಷಾ ಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿದರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ ಮಾತನಾಡಿ, ಕೊಂಕಣಿ ಭಾಷೆ ನಮ್ಮ ವೈಯಕ್ತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಗುರುತಾಗಿದೆ. ಭಾಷೆಯನ್ನು ಬರೆಯುವ ಮತ್ತು ಕಲಿಯುವ ಮೂಲಕವೇ ಅದರ ಬೆಳವಣಿಗೆ ಸಾಧ್ಯ. ಶಿಕ್ಷಣವು ಅಂಕಗಳಿಗೆ ಮಾತ್ರ ಸೀಮಿತವಾಗದೆ, ಸಂಸ್ಕಾರ, ಕೌಶಲ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ. ಕಸ್ತೂರಿ ಮೋಹನ ಪೈ ಮಾತನಾಡಿ, “ಸಮಾಜ ಸೇವೆ ಮಾಡುವವರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ವದ ಕಾರ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಭಾಷಾ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗಬೇಕು. ಪ್ರತಿಯೊಬ್ಬರೂ ತಮ್ಮ ಮಟ್ಟದಲ್ಲಿ ಕೊಂಕಣಿ ಸಮಾಜದ ಬೆಳವಣಿಗೆಗೆ ಕೈಜೋಡಿಸಬೇಕು” ಎಂದು ಹೇಳಿದರು.

ವಿಶ್ವ ಕೊಂಕಣಿ ಕೇಂದ್ರದ ಕೋಶಾಧಿಕಾರಿ ಬಿ.ಆರ್. ಭಟ್ ಅವರು ಮಾತನಾಡಿ, “ಶಿಕ್ಷಣವೆಂದರೆ ಜ್ಞಾನಾತ್ಮಕ ವಲಯದ ಅಭಿವೃದ್ಧಿಯ ಜೊತೆಗೆ ಮನೋಜನ್ಯ ಹಾಗೂ ಕಾಲಾನುಗುಣ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದಾಗಿದೆ. ಇಂತಹ ಶೈಕ್ಷಣಿಕ ಹಾಗೂ ಭಾಷಾ ಕೇಂದ್ರೀಕೃತ ಕಾರ್ಯಕ್ರಮಗಳನ್ನು ಆಯೋಜಿಸಿರುವ ಪ್ರತಿಷ್ಠಾನ ಶ್ಲಾಘನೀಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ 26 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಅದೇ ರೀತಿ ಶೈಕ್ಷಣಿಕ ಹಂತದಲ್ಲಿ 26 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುದ್ದು ಕಂದ ಸ್ಪರ್ಧೆಯ ವಿಜೇತ ಬಾಲ ಪ್ರತಿಭೆಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.
ಸಮಾಜಕ್ಕೆ ಅಪೂರ್ವ ಸೇವೆ ಸಲ್ಲಿಸಿದ ಶ್ರೀ ನಾರಾಯಣ ನಾಯಕ್ ಕಿನ್ನಾಜೆ ಅವರಿಗೆ “ಸಮಾಜ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶಬ್ದಕೋಶದ ಸಂಪಾದಕರಾದ ಶ್ರೀ ಎಸ್. ಸಂಜೀವ ಪಾಟೀಲ್ ಅವರಿಗೆ ಸಾಹಿತ್ಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ “ಶಬ್ದ ಸಾರಸ್ವತ” ಬಿರುದನ್ನು ಪ್ರಧಾನ ಮಾಡಿ, ರೂ. 2 ಲಕ್ಷ ಗೌರವಧನ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ “ಸ್ತೋತ್ರ–ಮಂತ್ರ ಕೌಸ್ತುಭ” ಹಾಗೂ “ಋಗ್ವೇದೀಯ ಸ್ಮಾರ್ತ ಸಂಧ್ಯಾವಂದನೆ” ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೊಡುಗೆಯಾಗಿ ನೀಡಿದ ನಾಲ್ಕು ಕಂಪ್ಯೂಟರ್‌ಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಮೂರು ಪುಸ್ತಕಗಳ ಪ್ರಕಾಶಕರಾದ ಶ್ರೀ ಡಿ ರಮೇಶ ನಾಯಕ್ ಮೈರ ಇವರು ಪ್ರಸ್ತಾವನೆಗೈದರು.

ಸಂಘದ ಅಧ್ಯಕ್ಷ ಶ್ರೀ ದಯಾನಂದ ನಾಯಕ್ ಪುಂಜಾಲ್ ಕಟ್ಟೆ ಸ್ವಾಗತಿಸಿದರು. ಪುರೋಹಿತ ವಸಂತ ಭಟ್ ಪ್ರಾರ್ಥಿಸಿದರು. ಡಾ. ವಿಜಯಲಕ್ಷ್ಮಿ ನಾಯಕ್, ಸತೀಶ್ ಪ್ರಭು ಮಣಿಯ ಹಾಗೂ ಸ್ವಾತಿ ನಾಯಕ್ ಒಡ್ಡೂರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮಹೇಶ್ ಪ್ರಭು ಮಣಿಯ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮುಂಬೈಯ ಪ್ರತಿಷ್ಠಿತ ಆರ್ತೋ ಸಿಸ್ಟಮ್ ಕಂಪನಿಯ ನಿರ್ದೇಶಕರಾದ ಡಾ. ರಾಜೇಶ್ ಪಾಟೀಲ್, ಕೆಎಂಸಿ ಆಸ್ಪತ್ರೆಯ ಡೆಪ್ಯೂಟಿ ಮ್ಯಾನೇಜರ್, ಹೆಚ್. ಆರ್ ಶ್ರೀಮತಿ ಸುಚೇತ ಬಾಲಕೃಷ್ಣ ನಾಯಕ್ ಪರ್ಕಳ, ಗಣಪತಿ ಶೆಣೈ ಡೆಚ್ಚಾರು, ಮುರಳೀಧರ ಪ್ರಭು ವಗ್ಗ, ಮುಂತಾದವರು ಉಪಸ್ಥಿತರಿದ್ದರು. ಅನೇಕ ಗಣ್ಯರು, ಹಿರಿಯರು ಹಾಗೂ ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *