Breaking
23 Mar 2026, Mon

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ಜಾಲತಾಣವನ್ನು ಸೃಷ್ಟಿಸಿದ ಆರೋಪಿಯ ಬಂಧನ

ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ ನಂತೆಯೇ ಕಾಣುವ ನಕಲಿ ಜಾಲತಾಣವನ್ನು ಸೃಷ್ಟಿಸಿ, ಮುಂಗಡ ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಯನ್ನು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ತಿಜಾರಾ ತಾಲೂಕಿನ ಸರಿಹೇಟಾ ನಿವಾಸಿ ನಸೀರ್ ಹುಸೇನ್ (21) ಎಂದು ಗುರುತಿಸಲಾಗಿದೆ.

ಆರೋಪಿಯು ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನ ವಿನ್ಯಾಸವನ್ನು ಹೋಲುವ ನಕಲಿ ಪೋರ್ಟಲ್ ಮೂಲಕ ಭಕ್ತರಿಗೆ ನಕಲಿ ರಸೀದಿಗಳನ್ನು ನೀಡಿ ಹಣ ಪಡೆಯುತ್ತಿದ್ದನು. ಇದನ್ನು ಗಮನಿಸಿದ ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ನೇತೃತ್ವದ ತಂಡವು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಿ ಡಿ. 19 ರಂದು ಬಂಧಿಸಿದೆ.

ಬಂಧಿತನಿಂದ ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸೇವೆಗಳು ಅಥವಾ ಕೊಠಡಿ ಕಾಯ್ದಿರಿಸುವ ವೇಳೆ ಭಕ್ತರು ಇಂತಹ ನಕಲಿ ಜಾಲತಾಣಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಭಕ್ತರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *