Breaking
25 Sep 2026, Fri

ವಿಟ್ಲ: ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ; 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಶಾಲಾ ಬಸ್ಸೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಆ.11ರಂದು ನಡೆದಿದೆ.

ಖಾಸಗಿ ಶಾಲೆಗೆ ಸೇರಿದ ಬಸ್ 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ಶಾಲೆಯತ್ತ ತೆರಳುತ್ತಿದ್ದ ವೇಳೆ ಕುಂಟುಕುಡೇಲು ಬಳಿ ಇಳಿಜಾರು ರಸ್ತೆಯಲ್ಲಿ ದಿಢೀರ್ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬಿಟ್ಟು ಕೆಳಗಿಳಿದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಬಸ್ಸಿನ ಮೇಲೆಯೇ ಬಿದ್ದಿದ್ದರೂ, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

ಅಪಘಾತದಿಂದ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದ್ದು, ಘಟನೆ ನಡೆದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.

Leave a Reply

Your email address will not be published. Required fields are marked *