ಬಂಟ್ವಾಳ: ದ.ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘಗಳ ಒಕ್ಕೂಟ ( ರಿ.) ಇದರ ಬಂಟ್ವಾಳ ತಾಲೂಕು ಘಟಕದ ನೂತನ ಸಂಘದ ಉದ್ಘಾಟನೆ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಹಿರಿಯ ವಕೀಲ ಸಂಘದ ಕಾನೂನು ಸಲಹೆಗಾರ ರಮೇಶ್ ಉಪಾಧ್ಯಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಿಕ್ಷಾ ಚಾಲಕರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಜಿಲ್ಲಾಧ್ಯಕ್ಷ ಭರತ್ ಕುಮಾರ್ ಮಾತನಾಡಿ, ರಿಕ್ಷಾ ಚಾಲಕರು ಕಾನೂನಿಗೆ ಬೆಲೆ ನೀಡುವ ಶಿಸ್ತು ಬದ್ದವಾದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಬೇಕು. ರಿಕ್ಷಾ ಚಾಲಕರ ಸಂಘಟನೆ ಎಲ್ಲರನ್ನು ಬೆಳೆಸುವ ಉದ್ದೇಶದಿಂದ ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದರು.

ರಿಕ್ಷಾ ಚಾಲಕರಿಗೆ ಖಾಕಿ ಒಂದೇ ಬಣ್ಣವಾಗಿರಬೇಕು ಹೊರತು , ಜಾತಿ ಧರ್ಮದ ವಿಚಾರಕ್ಕೆ ಬಲಿಯಾಗಬಾರದು. ಮತ ಚಲಾಯಿಸುವ ಹಕ್ಕನ್ನು ಹೊರತು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡು ಸಂಘದ ಉದ್ದೇಶ, ನೀತಿ ಮತ್ತು ನಿಯಮಗಳಿಗೆ ಘಾಸಿ ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.
ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಮಾತನಾಡಿ, ಜಿಲ್ಲೆಯ ಪದಾಧಿಕಾರಿಗಳ ಸಹಕಾರದಿಂದ ನೂತನ ಘಟಕ ನಿರ್ಮಾಣಕ್ಕೆ ಸಾಧ್ಯವಾಯಿತು. ಕಾನೂನು ಮೀರಿ ಯಾವುದೇ ಕೆಲಸ ಮಾಡಬೇಡಿ.ಕಾನೂನಿಗೆ ಗೌರವ ನೀಡಿ. ನೂತನ ಸಂಘದ ಬೆಳವಣಿಗೆಗೆ ರಿಕ್ಷಾ ಚಾಲಕರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನೂತನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಅವರು ನೂತನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಪಲ್ಲಮಜಲು, ರಮೇಶ್ ಪಿ, ಉಪಾಧ್ಯಕ್ಷರುಗಳಾಗಿ ಶಂಕರ್ ಬಡ್ಡಕಟ್ಟೆ, ರೋಶನ್ ಬಿ.ಸಿ ರೋಡು, ರಶೀದ್ ಮೈಂದಾಲ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೃಷ್ಣ ಕುಮಾರ್ ತಲೆಂಬಿಲ, ಜೊತೆ ಕಾರ್ಯದರ್ಶಿಯಾಗಿ ಸಂಶೀರ್ ಕೈಕಂಬ, ಗೌರವ ಸಲಹೆಗಾರರಾಗಿ ಆನಂದ ಶೆಟ್ಟಿ ಬಂಟ್ವಾಳ, ಉಸ್ಮಾನ್ ಕಾರಾಜೆ, ಕೋಶಾಧಿಕಾರಿ ಸುರೇಶ್ ಕುಲಾಲ್ ಮೈಯ್ಯರಬೈಲು, ಸಂಘಟನಾ ಕಾರ್ಯದರ್ಶಿ ಪ್ರಸಾದ್ ನೊರನಡ್ಕ, ಸತ್ತಾರ್ ಗೂಡಿನಬಳಿ, ಅಶೋಕ್ ಪಾಣೆಮಂಗಳೂರು, ಹರೀಶ್ ನಾಯ್ಕ ಪೂಪಾಡಿಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯಶೋಧರ ಕಲ್ಲಡ್ಕ, ಸತೀಶ್ ಪಾಣೆಮಂಗಳೂರು, ಅಕ್ಬರ್ ಆಲಿ ಮೈಂದಾಳ, ವಸಂತ ನಾವೂರ, ಮಹಮ್ಮದ್ ಮುಸ್ತಾಪ ಮಣಿಹಳ್ಳ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಎ.ಆರ್.ಟಿ.ಒ.ಚರಣ್ ಕೆ. ಉದ್ಯಮಿ ಜಗನ್ನಾಥ ಬಂಟ್ವಾಳ, ಟ್ರಾಫಿಕ್ ಎ.ಎಸ್.ಐ.ಲೋಕೇಶ್, ಎ.ಎಸ್.ಐ.ರವಿಚಂದ್ರ, ಜಿಲ್ಲಾ ಗೌರವಾಧ್ಯಕ್ಷ ಶೇಖರ್ ದೇರಳಕಟ್ಟೆ, ಗೌರವಾಧ್ಯಕ್ಷ ಅಶೋಕ್ ಶೆಟ್ಟಿ, ಪ್ರ.ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಉದ್ಯಮಿ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಆನಂದ ಶೆಟ್ಟಿ ಸ್ವಾಗತಿಸಿ, ಶೀನ ಚೆಂಡ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.


