Breaking
23 Dec 2024, Mon

ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ:ಆರೋಪಿಗಳ ಬಂಧನ

ಉಡುಪಿ : ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ವಿಷ ಉಣಿಸಿ ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಘಟನೆ ಮರ್ಣೆ ಗ್ರಾಮದ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪತ್ನಿ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಬಾಲಕೃಷ್ಣ (44) ಎಂದು ಗುರುತಿಸಲಾಗಿದೆ. ಇವರ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಹಿರ್ಗಾನದ ದಿಲೀಪ್ ಬಂಧಿತ ಆರೋಪಿಗಳು.

ಬಾಲಕೃಷ್ಣ ಪೂಜಾರಿ ಕಳೆದ 25 ದಿನಗಳಿಂದ ಜ್ವರ, ವಾಂತಿ ಆಗಿ ಅನಾರೋಗ್ಯದಿಂದ ಬಳಲುತ್ತಿದ್ದ. ಕಾಮಾಲೆ ರೋಗ ಎಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾರ್ಕಳ ರೋಟರಿ, ಮಣಿಪಾಲ ಕೆಎಂಸಿ, ಮಂಗಳೂರಿನ ವೆನ್ಲಾಕ್, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಹಾಗೂ ಮಂಗಳೂರಿನ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗಿತ್ತು. ಆದರೆ, ಅ.20 ರಂದು ಬಾಲಕೃಷ್ಣ ಮನೆಯಲ್ಲಿ ಸಾವನ್ನಪ್ಪಿದ್ದ.

ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪ್ರತಿಮಾಳ ಸಹೋದರನೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ತನಿಖೆ ವೇಳೆ ಪ್ರತಿಮಾ ಮತ್ತು ಆಕೆಯ ಪ್ರಿಯಕರನ ದಿಲೀಪ್ ಮೇಲೆ ಸಂಶಯ ವ್ಯಕ್ತವಾಗಿ ವಿಚಾರಣೆಗೆ ಒಳಪಡಿಸಲಾಯಿತು.ಬಾಲಕೃಷ್ಣ ಸಾವಿನ ಬಳಿಕ ಪತ್ನಿ ಪ್ರತಿಮಾನ ಚಲನವಲನ ಬಗ್ಗೆ ಆಕೆಯ ಸಹೋದರನೇ ಅನುಮಾನಗೊಂಡಿದ್ದ. ಸಾವಿನ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದಾನೆ. ಪ್ರತಿಮಾ ತನ್ನ ಸಹೋದರನ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ಊಟದಲ್ಲಿ ವಿಷ ಬೆರೆಸಿ ಬಳಿಕ ಬೆಡ್ ಶೀಟ್ ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ಪ್ರಿಯಕರನ ಜೊತೆ ಸೇರಿಕೊಂಡು ಪತಿ ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *