Breaking
24 Dec 2024, Tue

ಮಂಡ್ಯದಲ್ಲೊಂದು ವಿನೂತನ ಯತ್ನ: ರೈತರಿಂದ ರೈತರಿಗಾಗಿ ರೈತ ಶಾಲೆ, ಇದು ರಾಜ್ಯದಲ್ಲೇ ಮೊದಲು

ಮಂಡ್ಯ: ಕೃಷಿ ಮಾಡಿ ಜೀವನ ನಡೆಸುವವರ ಸಮಸ್ಯೆಗಳ ಪರಿಹಾರಕ್ಕಾಗಿ ರೈತರಿಂದಲೇ ರೈತರಿಗಾಗಿ ‘ರೈತರ ಶಾಲೆ’ಯೊಂದನ್ನು ಆರಂಭಿಸಲು ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಉಪನ್ಯಾಸಕರೊಬ್ಬರು ಮುಂದಾಗಿದ್ದಾರೆ. ಅವರಿಗೆ ಕೃಷಿ ಕುಟುಂಬಗಳ ಹಿನ್ನೆಲೆಯುಳ್ಳ ಶಿಕ್ಷಕರ ಗುಂಪು ಸಾಥ್ ನೀಡಲು ಮುಂದೆ ಬಂದಿದೆ.

ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಮಾಡಿಕೊಳ್ಳಲು ಉತ್ಸಾಹ ಹೊಂದಿರುವವರನ್ನು ಸಬಲೀಕರಣಗೊಳಿಸುವುದು ಈ ‘ರೈತ ಶಾಲೆ’ಯ ಉದ್ದೇಶವಾಗಿದೆ. ಕಳೆದ ವರ್ಷದ ಬರ ಪರಿಸ್ಥಿತಿ, ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ರೈತರು ಎದುರಿಸಿದ ಕಷ್ಟಗಳು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ರೈತರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ತೆರೆಯಲು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ತಂಡ ನಿರ್ಧರಿಸಿದೆ.

ಈ ತಂಡದಲ್ಲಿ ರೈತ ಕುಟುಂಬದಿಂದ ಬಂದ ಶಿಕ್ಷಕರೇ ಇದ್ದಾರೆ. ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ವಿಚಾರಗಳಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ತಂಡದ ಹಾಗೂ ಅವರ ಶಾಲೆಯ ಉದ್ದೇಶವಾಗಿದೆ.

ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಮತ್ತು ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿಯೂ ಈ ತಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. ಈ ತಂಡವು ಈಗಾಗಲೇ 200ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಅರಿತುಕೊಂಡಿದೆ. ಅವರನ್ನು ಪ್ರೋತ್ಸಾಹಿಸಲು, ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರ ನಡುವೆ ಕೊಂಡಿಯಾಗಿ ತಂಡ ಕೆಲಸ ಮಾಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ರೈತರಿಗೆ ಶಿಕ್ಷಣ ನೀಡುವುದರ ಜತೆಗೆ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿಗಳು ಮತ್ತು ತಜ್ಞರಿಂದ ‘ರೈತರ ಶಾಲೆ’ಯಲ್ಲಿ ವಿಚಾರ ಮಂಡನೆ ಕಾರ್ಯಕ್ರಮಗಳನ್ನು ಆಯೋಜಿಸಲು ತಂಡವು ನಿರ್ಧರಿಸಿದೆ. ಶಾಲೆಯು ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರೈತರ ಯಶೋಗಾಥೆಗಳನ್ನು ಸ್ಥಳೀಯ ರೈತರ ಬಳಿ ಹಂಚಿಕೊಳ್ಳಲಿದೆ. ಆಲಕೆರೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಸೆಮಿನಾರ್ ಹಾಲ್ ಮತ್ತು ಕೆಲವು ತರಗತಿ ಕೊಠಡಿಗಳು ಸಿದ್ಧಗೊಳ್ಳಲಿವೆ. ರಾಜ್ಯಾದ್ಯಂತ ಇಂತಹ ಹಲವು ಶಾಲೆಗಳನ್ನು ತೆರೆಯುವ ಯೋಜನೆಯನ್ನು ತಂಡ ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

Leave a Reply

Your email address will not be published. Required fields are marked *