ಬಂಟ್ವಾಳ : ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿದೆಡೆ ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆಯಿಂದ ಅಡಚಣೆ ಉಂಟಾಗಿದ್ದು ಜನ ಪರದಾಡುವಂತಾಗಿದ್ದು ,ಸಮಸ್ಯೆ ನಿವಾರಣೆ ಕುರಿತು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ (ನಿ.) ಅಧ್ಯಕ್ಷ ಪ್ರಭಾಕರ ಪ್ರಭು ಕರ್ನಾಟಕ ಸರಕಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಸಮಸ್ಯೆ ಕುರಿತು ಪತ್ರ ಬರೆದಿರುವ ಪ್ರಭಾಕರ ಪ್ರಭು “ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ನ್ಯಾಯ ಬೆಲೆ ಅಂಗಡಿಗಳು ಬಿ ಪಿ ಎಲ್ ಹಾಗೂ ಅಂತ್ಯೋದಯ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ವಿತರಣೆ ಮಾಡುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ನ್ಯಾಯ ಬೆಲೆ ಅಂಗಡಿಗಳಲ್ಲಿ ದಿನಂಪ್ರತಿ ನೂರಾರು ಗ್ರಾಹಕರು ಬೆಳಂಬೆಳಗ್ಗೆ ಪಡಿತರ ಸಾಮಾಗ್ರಿ ಪಡೆಯಲು ಬರುತ್ತಿದ್ದು , ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಸಿಗದೇ ವಾಪಸ್ಸು ಹೋಗುತ್ತಿದ್ದಾರೆ .ತಿಂಗಳಿನ ಪಡಿತರ ಪಡೆಯಲು 4-5 ದಿವಸ ಗ್ರಾಹಕರು ದಿನ ಕೆಲಸ ಬಿಟ್ಟು ಬರುತ್ತಿದ್ದು ,ಕೂಲಿ ಕಾರ್ಮಿಕರಾದ ಬಡ ಕುಟುಂಬಗಳಿಗೆ ಹಣಕಾಸಿನ ಅಡಚಣೆಯಾಗುತ್ತಿದೆ .ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದ ಗ್ರಾಹಕರು ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ಹಿಡಿ ಶಾಪ ಹಾಕುತ್ತಾ ಕಿರಿಕಿರಿ ಮಾಡುತ್ತಿದ್ದಾರೆ .
ಪಡಿತರ ಈ ಸಮಸ್ಯೆ ನಿತ್ಯ ನಿರಂತರವಾಗಿ ಹಲವು ತಿಂಗಳುಗಳಿಂದ ಸಮಸ್ಯೆಯಾಗಿಯೇ ಮುಂದುವರಿದು , ಶಾಶ್ವತ ಪರಿಹಾರ ಕಂಡಿಲ್ಲವಾಗಿದೆ .ಆದುದರಿಂದ ಬಡ ಬಿ ಪಿ ಎಲ್ ಕುಟುಂಬಗಳಿಗೆ ಸಹಕಾರಿಯಾಗುವಂತೆ ಪಡಿತರ ಪಡೆಯುವಲ್ಲಿನ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇನೆ” ಎಂದು ಕೊರಿದ್ದಾರೆ.