ಕಾಸರಗೋಡು: ಆದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದ ಆರೋಪಿಗೆ ನ್ಯಾಯಾಲಯವು 7 ವರ್ಷ ಸಜೆ, 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ದುಲ್ ಶಫೀಖ್ (39) ಶಿಕ್ಷಿಸಲ್ಪಟ್ಟ ಆರೋಪಿಯಾಗಿದ್ದಾನೆ.

2019 ಫೆಬ್ರವರಿ 13 ರಂದು ಮಧ್ಯಾಹ್ನದ ವೇಳೆ ಆರೋಪಿ ಅಬ್ದುಲ್ ಶಫೀಖ್ ಕಾರಿನಲ್ಲಿ 12.22 ಗ್ರಾಂ ಮೆಥಾಫಿಟಮಿನ್ ಮಾದಕವಸ್ತು ಹಾಗೂ ಎರಡು ಬಾಟಲಿ ಮದ್ಯ ಸಾಗಿಸುತ್ತಿದ್ದ. ಈ ವೇಳೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಆದೂರು ಪೊಲೀಸರು ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದ್ದರು.

ಇದೀಗ ನ್ಯಾಯಾಲಯವು ಆರೋಪಿಗೆ ಶಿಕ್ಷೆ ಪ್ರಕಟ ಮಾಡಿದ್ದು 7 ವರ್ಷ ಸಜೆ, 1 ಲಕ್ಷ ರೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ದಂಡ ಪಾವತಿಸದಿದ್ದಲ್ಲಿ 1 ವರ್ಷ ಅಧಿಕ ಸಜೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದೆ.


