Breaking
12 Nov 2026, Thu

ಸಿದ್ದಕಟ್ಟೆಯಲ್ಲಿ 30 ವರ್ಷಗಳ ವೈದ್ಯಕೀಯ ಸೇವೆ ಸಲ್ಲಿಸಿದ ಡಾ. ಕೃಷ್ಣಮೂರ್ತಿಗೆ ಸಾರ್ವಜನಿಕ ಅಭಿನಂದನೆ

ಸಿದ್ದಕಟ್ಟೆ: ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಜನಸಾಮಾನ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಮುಖ್ಯ. ವ್ಯಕ್ತಿ ಎಷ್ಟೇ ಅಧಿಕಾರ, ಸಂಪತ್ತು ಹಾಗೂ ಸೌಲಭ್ಯಗಳನ್ನು ಹೊಂದಿದ್ದರೂ ಆರೋಗ್ಯದಲ್ಲಿ ಏರುಪೇರಾದಾಗ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಅಂತಹ ಸಂದರ್ಭದಲ್ಲಿ ರೋಗಿಗಳಿಗೆ ಧೈರ್ಯ ತುಂಬಿ ಆತಂಕ ನಿವಾರಿಸುವ ಮಹತ್ವದ ಕಾರ್ಯವನ್ನು ವೈದ್ಯಕೀಯ ವೃತ್ತಿಯಿಂದ ಮಾತ್ರ ಮಾಡಲು ಸಾಧ್ಯ.

ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಸಾರ್ವಜನಿಕವಾಗಿ ಅಭಿನಂದಿಸುವುದು ಶ್ಲಾಘನೀಯ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಇತ್ತೀಚೆಗೆ ಸಿದ್ದಕಟ್ಟೆಯ ಸ್ವಾಗತ್ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆಯ ದಿನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸ್ವಾಗತ್ ಬಿಲ್ಡಿಂಗ್ ಮಾಲಕರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಪರವಾಗಿ ಕಳೆದ 30 ವರ್ಷಗಳಿಂದ ಸಿದ್ದಕಟ್ಟೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಕೃಷ್ಣಮೂರ್ತಿ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಕೃಷ್ಣಮೂರ್ತಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವುದು ತಮಗೆ ಆತ್ಮತೃಪ್ತಿ ತಂದಿದೆ. ಸಾರ್ವಜನಿಕರಿಂದ ದೊರೆತ ಈ ಗೌರವಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಮ್ಮ ಕುಡ್ಲ ನ್ಯೂಸ್ ಚಾನೆಲ್ ನಿರ್ದೇಶಕರಾದ ಶರಣ್ ಕರ್ಕೇರ, ಆದಿತ್ಯ ಕರ್ಕೇರ, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು, ಸ್ವಾಗತ್ ಕಾಂಪ್ಲೆಕ್ಸ್ ಮಾಲಕರಾದ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಬು ಶೆಟ್ಟಿ, ಸಿಎ ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶಿವ ಗೌಡ, ಕೇಶವ ಶಬರೀಶ್, ಪ್ರಕಾಶ್ ಶೆಟ್ಟಿ, ಸ್ವಸ್ತಿಕ್, ಡಾ. ರಕ್ಷಿತ್ ಭಟ್, ಹೇಮಚಂದ್ರ ಗೌಡ, ಗಣೇಶ ಹೊಳ್ಳ, ಸಂತೋಷ ಅಂಚನ್, ವಾರಿಜ ಮೋಹನ್, ಸುರೇಶ್ ಶೆಟ್ಟಿ ಕಾಮದೇನು, ಮೀನಾಕ್ಷಿ, ಸಂಧ್ಯಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *