ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮಹಿಳೆಯ ಎರಡು ಬೆರಳುಗಳನ್ನು ಕತ್ತರಿಸಿ, ಅವರ ಚಿನ್ನದ ಸರಗಳನ್ನು ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 13ರಂದು ರಾತ್ರಿ ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಗಣೇಶ ಹಬ್ಬದ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಇಬ್ಬರೂ ಪಾತಕಿಗಳು ಬೈಕ್ ನಲ್ಲಿ
ಅವರ ಬಳಿಗೆ ಬಂದು ಬೆದರಿಸಿ ಅವರ ಚಿನ್ನದ ಸರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಭಯಭೀತರಾದ ಉಷಾ ತಮ್ಮ ಚಿನ್ನದ ಸರವನ್ನು ಕೊಟ್ಟುಬಿಟ್ಟರು.

ಆದರೆ ವರಲಕ್ಷ್ಮಿ ವಿರೋಧಿಸಿದಾಗ, ಯೋಗಾನಂದ ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಅವರ ಎರಡು ಬೆರಳುಗಳನ್ನು ಕತ್ತರಿಸಿದ್ದ.

ನಂತರ ಆರೋಪಿಗಳು 55 ಗ್ರಾಂ ಚಿನ್ನಾಭರಣಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರ ವಿಶೇಷ ತನಿಖಾ ತಂಡ ವಾರಗಳ ಕಾಲ ಈ ದುಷ್ಕರ್ಮಿಗಳನ್ನು ಹುಡುಕಾಡಿತ್ತು. ಇಬ್ಬರೂ ತಮಿಳುನಾಡು, ಗೋವಾಗಳಿಗೆ ಪರಾರಿಯಾಗಿ ಅಲ್ಲಿ ಕಾಲ ಕಳೆದಿದ್ದು, ನಂತರ ರಾಜ್ಯಕ್ಕೆ ಬಂದಾಗ ಸಿಕ್ಕಿಬಿದ್ದಿದ್ದಾರೆ. ಇವರು ಕದ್ದ 74 ಗ್ರಾಂ ಚಿನ್ನಾಭರಣ ಮತ್ತು ದಾಳಿಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳೀಯ ಸಿಸಿಟಿವಿಯೊಂದರಲ್ಲಿ ದರೋಡೆಯ ಭಯಾನಕ ದೃಶ್ಯಾವಳಿಗಳು ಸೆರೆಯಾಗಿತ್ತು.



