Breaking
28 Jun 2026, Sun

ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ ಪೊಲೀಸ್ ಕಾನ್ಸ್ಟೇಬಲ್

ಬೆಳಗಾವಿ: ಸಂಶಯ ಪೀಡಿತ ಪೊಲೀಸ್ ಕಾನ್ಸ್ಟೇಬಲ್ವೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ ನಲ್ಲಿ ಕಳೆದ 5 ದಿನಗಳ ಹಿಂದೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾಶಮ್ಮ ನೆಲ್ಲಿಗಣಿ (34) ಎಂಬಾಕೆ ಕೊಲೆಯಾದ ದುರ್ದೈವಿಯಾಗಿದ್ದು, ಪಿಸಿ ಸಂತೋಷ್ ಕಾಂಬಳೆ ಹತ್ಯೆಗೈದು ಪರಾರಿಯಾಗಿದ್ದಾನೆ.

ಮೃತ ಕಾಶಮ್ಮ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 13 ವರ್ಷಗಳ ಹಿಂದೆ ಸಂತೋಷ್ ಹಾಗೂ ಕಾಶಮ್ಮ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸಂತೋಷ್ ಹೆಂಡತಿಯ ಮೇಲೆ ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಕಾಶಮ್ಮ ಗಂಡನಿಂದ ದೂರವಾಗಿದ್ದು, ತವರು ಮನೆ ಸೇರಿದ್ದರು. ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮದುವೆ ಜೀವನದಲ್ಲಿ ನಿರಂತರ ಕಲಹ ಮುಂದುವರಿದ ಹಿನ್ನೆಲೆಯಲ್ಲಿ ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 5, 2025ರಂದು ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಆರೋಪಿ ಸಂತೋಷ್, ಕಾಶಮ್ಮನನ್ನು ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

ಅಕ್ಟೋಬರ್ 13ರ ರಾತ್ರಿ 8 ಗಂಟೆಯ ವೇಳೆಗೆ ಸಂತೋಷ್ ಕಾಶಮ್ಮನ ಮನೆಗೆ ತೆರಳಿ ಗಲಾಟೆ ನಡೆಸಿದ್ದ ಸಂತೋಷ್ ಕೋಪದಿಂದ ಕತ್ತು ಕೊಯ್ದು , ಹೊಟ್ಟೆಗೆ ಮೂರು ಬಾರಿ ಇರಿದು ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮೂರು ದಿನಗಳ ಬಳಿಕ ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *