ಕಾಸರಗೋಡು: ಭಯಾನಕ ಅಮೀಬಿಕ್ ಮಿದುಳು ಜ್ವರ ಕಾಸರಗೋಡಿಗೆ ಕಾಲಿಟ್ಟಿದ್ದು , ಜನ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯ 6 ವರ್ಷದ ಬಾಲಕ ಸಹಿತ ಕಣ್ಣೂರಿನ ಮೂರೂವರೆ ವಯಸ್ಸಿನ ಮಗುವಿಗೂ ಮಿದುಳು ಜ್ವರ ಇರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಇಬ್ಬರಿಗೂ ಕಲ್ಲಿಕೋಟೆ ಮೆಡಿಕಲ್ ಕಾಲೇಜಿನ ಪ್ರತ್ಯೇಕ ನಿಗಾ ವಿಭಾಗದಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಆತಂಕಕಾರಿಯೇನು ಇಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ.
ಅಮೀಬಿಕ್ ಮಿದುಳು ಜ್ವರವು ಮೆದುಳಿನ ಮೇಲೆ ನೇರ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದ್ದು, ತಲೆನೋವು, ವಾಂತಿ, ವಾಕರಿಕೆ, ಕುತ್ತಿಗೆ ನೋವು ಮೊದಲಾದವುಗಳೊಂದಿಗೆ ದಿಢೀರನೆ ಜ್ವರ ಬರುವುದು ಈ ರೋಗ ಸೋಂಕಿನ ಲಕ್ಷಣವಾಗಿದೆ. ಇದರ ಹರಡುವಿಕೆಯನ್ನು ಆರೋಗ್ಯ ಇಲಾಖೆ ನಿಯಂತ್ರಿಸಿದೆಯಾದರೂ ರೋಗದ ಮೂಲ ಪತ್ತೆಯಾಗಿಲ್ಲ.

ಈ ವರ್ಷ ಕೇರಳದಲ್ಲಿ 42 ಮಂದಿಗೆ ಅಮೀಬಿಕ್ ಮಿದುಳು ಜ್ವರ ಬಾಧಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ 45 ದಿನಗಳಲ್ಲಿ ಕೇರಳದಲ್ಲಿ ಒಟ್ಟು 15 ಮಂದಿ ಅಮೀಬಿಕ್ ಮಿದುಳು ಜ್ವರಕ್ಕೆ ಬಲಿಯಾಗಿದ್ದಾರೆ.
ಆರೋಗ್ಯ ಇಲಾಖೆ ಈ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿದ್ದು, ಎಲ್ಲ ಜಲಮೂಲಗಳನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ಆರೋಗ್ಯ ಇಲಾಖೆ ಸ್ಥಳೀಯಾಡಳಿತ ಸಹಕಾರದೊಂದಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.



