ಕಕ್ಯಪದವು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಾಮದಪದವು ವಲಯ ಮತ್ತು ಎಲ್.ಸಿ.ಆರ್. ಇಂಡಿಯನ್ ಶಾಲೆಯ ಸಹಯೋಗದಲ್ಲಿ ನ.12ರಂದು ಎಲ್.ಸಿ.ಆರ್. ಇಂಡಿಯನ್ ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿರುವ ಕಲಾ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎಲ್.ಸಿ.ಆರ್. ಇಂಡಿಯನ್ ಶಾಲೆಯ ವಿದ್ಯಾರ್ಥಿಗಳು ಒಟ್ಟು 10 ಪ್ರಶಸ್ತಿಗಳನ್ನು ಗಳಿಸುವ ಮೂಲಕ ಸಮಗ್ರ ಪ್ರಶಸ್ತಿ (Overall Championship) ತಮ್ಮದಾಗಿಸಿಕೊಂಡರು.

ಚರ್ಚಾ ಸ್ಪರ್ಧೆಯಲ್ಲಿ 10ನೇ ತರಗತಿಯ ಗೌತಮ್ ನಾಯಕ್, ಚಿತ್ರಕಲೆಯಲ್ಲಿ 9ನೇ ತರಗತಿಯ ಕೆ. ಪ್ರತ್ಯುಷ್ ಆಚಾರ್ಯ, ಜಾನಪದ ನೃತ್ಯದಲ್ಲಿ 10ನೇ ತರಗತಿಯ ಶರಣ್ಯ ಮತ್ತು ಬಳಗ ಹಾಗೂ ಕವ್ವಾಲಿಯಲ್ಲಿ 10ನೇ ತರಗತಿಯ ಮೊಹಮ್ಮದ್ ಶಾಹಿರ್ ಮತ್ತು ಬಳಗ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಕೃತ ಪಠಣದಲ್ಲಿ ಗೌತಮ್ ನಾಯಕ್, ಭಾವಗೀತೆಯಲ್ಲಿ ತನ್ವಿ ಜೆ.ಪಿ. ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಜೇಷ್ಮ ಎಸ್. ಕುಲಾಲ್ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಾನಪದ ಗೀತೆಯಲ್ಲಿ ಹಿತೇಶ್ ಟಿ.ಆರ್., ಭರತನಾಟ್ಯದಲ್ಲಿ ಸಿಂಚನ ಹಾಗೂ ಕವನ ವಾಚನದಲ್ಲಿ ಧಾನ್ವಿ ವೈ. ತೃತೀಯ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಹೆಚ್ಚಿನ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.


