ಬಳ್ಳಮಂಜ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಕಂಪು ಗ್ರಾಮೀಣ ಭಾಗದಲ್ಲೂ ಪಸರಿಸುವ ಉದ್ದೇಶದಿಂದ ಬಳ್ಳಮಂಜದ ಸಮುದಾಯ ಭವನದಲ್ಲಿ ‘ಗುರುಭಕ್ತಿ’ ನಾಟ್ಯಾಲಯದ ಭರತನಾಟ್ಯ ತರಬೇತಿ ತರಗತಿಯು ನವೆಂಬರ್ 10ರಂದು ಶುಭಾರಂಭಗೊಂಡಿತು.

ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಭರತನಾಟ್ಯದಂತಹ ಶಾಸ್ತ್ರೀಯ ಕಲಾ ತರಗತಿಗಳು ಆರಂಭವಾಗಿರುವುದು ಊರಿನ ಜನತೆಯ ಸೌಭಾಗ್ಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೃತ್ಯಕಲೆಯಲ್ಲಿ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನೃತ್ಯ ನಿರ್ದೇಶಕಿ ಹಾಗೂ ಗುರು ವಿದುಷಿ ಸ್ವಾತಿ ಜಯರಾಮ್ ಮಾತನಾಡಿ, ತಮ್ಮಲ್ಲಿ ನೃತ್ಯಾಭ್ಯಾಸ ಮಾಡಿದ ವಿದ್ಯಾರ್ಥಿನಿ ಇಂದು ಕೌಟುಂಬಿಕ ಜವಾಬ್ದಾರಿಗಳ ನಡುವೆಯೂ ಭರತನಾಟ್ಯ ಕಲೆಯನ್ನು ಮುಂದುವರಿಸಿ, ಬಳ್ಳಮಂಜದಂತಹ ಗ್ರಾಮೀಣ ಪ್ರದೇಶದಲ್ಲಿ ನಾಟ್ಯಾಲಯ ಆರಂಭಿಸಿರುವುದು ಶಿಕ್ಷಕಿಯಾಗಿ ತನಗೆ ಕಲಿಸಿದ ವಿದ್ಯೆ ಸಾರ್ಥಕವಾದ ಅನುಭವ ನೀಡಿದೆ. ಈ ಪ್ರಯತ್ನದಿಂದ ಇನ್ನಷ್ಟು ಪ್ರತಿಭಾವಂತ ಕಲಾವಿದರು ರೂಪುಗೊಳ್ಳುವಂತಾಗಲಿ ಎಂದು ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಸರಕಾರಿ ಪದವಿಪೂರ್ವ ಕಾಲೇಜು ಪುಂಜಾಲಕಟ್ಟೆಯ ನಿವೃತ್ತ ಅಧಿಕಾರಿ ಪ್ರವೀಣ್ ಕುಮಾರ್ ದೋಟ ಮಾತನಾಡಿ, ಗುಂಡಿಯಲ್ಕೆ ಕುಟುಂಬವು ಹಲವು ಸಾಮಾಜಿಕ ಚಿಂತನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಈ ಕುಟುಂಬದ ಮಹಿಳೆಯೊಬ್ಬರು ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಚ್ಚಿನ ಗ್ರಾಮದಲ್ಲಿ ನಾಟ್ಯಾಲಯ ಆರಂಭಿಸಿರುವುದು ಸಂತಸದ ವಿಚಾರ. ಊರಿನ ಜನರ ಪ್ರೋತ್ಸಾಹ ಮತ್ತು ಆಶೀರ್ವಾದದಿಂದ ಸಂಸ್ಥೆಯು ಎತ್ತರಕ್ಕೆ ಬೆಳೆದು ಉತ್ತಮ ನೃತ್ಯ ಕಲಾವಿದರನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗುಂಡಿಯಲ್ಕೆ ಕುಟುಂಬದ ಹಿರಿಯರಾದ ಜಿ. ಬಾಲಕೃಷ್ಣ, ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

ಕುಮಾರಿ ಭಕ್ತಿಪ್ರಿಯ ಎ. ಭಂಡಾರಿ ಪ್ರಾರ್ಥಿಸಿದರು. ನಾಟ್ಯಾಲಯದ ನೃತ್ಯ ಶಿಕ್ಷಕಿ ಅಮಿತಾ ಅಶೋಕ್ ಗುಂಡಿಯಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಅಶೋಕ್ ಗುಂಡಿಯಲ್ಕೆ ವಂದಿಸಿದರು.
ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಕಲಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಭಾಗದ ಮಕ್ಕಳಿಗೆ ಸ್ಥಳೀಯವಾಗಿಯೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವ ಅವಕಾಶ ಕಲ್ಪಿಸಿರುವ ‘ಗುರುಭಕ್ತಿ’ ನಾಟ್ಯಾಲಯದ ಆರಂಭವು ಬಳ್ಳಮಂಜದ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ನಿರೀಕ್ಷೆ ಮೂಡಿಸಿದೆ.


