Breaking
13 Nov 2026, Fri

ಎಲ್.ಸಿ.ಆರ್. ಇಂಡಿಯನ್ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸಮಾರೋಪ: ವಿಜೇತರಿಗೆ ಪ್ರಶಸ್ತಿ ಪ್ರದಾನ

ಕಕ್ಯಪದವು: 2026-27ನೇ ಸಾಲಿನ ವಾಮದಪದವು ವಲಯ ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭವು ನ.12ರಂದು ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿ, ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಣ ಸಂಯೋಜಕ ರಮಾನಂದ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜೋಯಲ್ ಲೋಬೊ, ಪ್ರತಿಭಾ ಕಾರಂಜಿ ನಿರ್ವಹಣಾ ತಂಡದ ಸದಸ್ಯರು, ಶಾಲಾ ಪ್ರಾಂಶುಪಾಲ ಜೋಸ್ಟನ್ ಲೋಬೊ, ಸಂಯೋಜಕ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ವಿಜಯ ಕೆ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಂಯೋಜಕ ರಮಾನಂದ್ ಅವರು ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರತಿಭಾ ಕಾರಂಜಿಯಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಅವಕಾಶ ಕಲ್ಪಿಸಿದ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು ಹಾಗೂ ಮುಖ್ಯೋಪಾಧ್ಯಾಯಿನಿಯವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ಕಾರ್ಯವನ್ನೂ ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವಾಮದಪದವು ವಲಯ ಮಟ್ಟದ ಪ್ರತಿಭಾ ಕಾರಂಜಿಯ ಸಮಗ್ರ ಪ್ರಶಸ್ತಿಯ ಫಲಿತಾಂಶ ಪ್ರಕಟಿಸಲಾಯಿತು. ಎಲ್.ಸಿ.ಆರ್. ಇಂಡಿಯನ್ ಶಾಲೆ, ಕಕ್ಯಪದವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಓಂ ಜನಹಿತಾಯ ಶಾಲೆ, ಗುಡ್ಡೆಯಂಗಡಿ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪ್ರತಿಭಾ ಕಾರಂಜಿಯ ಯಶಸ್ವಿ ಆಯೋಜನೆಗೆ ಸಹಕರಿಸಿದ ನಿರ್ವಹಣಾ ತಂಡದ ಸದಸ್ಯರನ್ನು ಶಾಲೆಯ ವತಿಯಿಂದ ಪ್ರಾಂಶುಪಾಲ ಜೋಸ್ಟನ್ ಲೋಬೊ ಅವರು ಸ್ಮರಣಿಕೆ ನೀಡಿ ಗೌರವಿಸಿದರು.

ಸಹಶಿಕ್ಷಕ ಪ್ರಶಾಂತ್ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಕಲಾಸಕ್ತಿಗೆ ಪ್ರೋತ್ಸಾಹ ನೀಡಿದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭವು ಸಂಭ್ರಮದಿಂದ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *