ದಾವಣಗೆರೆ: ಅಮಲು ಬರುವ ಸಿರಪ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಕುಮಾರ್, ಅಜಿಮುದ್ದೀನ್, ಮುಹಮದ್ ಶಾರೀಕ್, ಸೈಯದ್ ಬಾಬು, ಮತ್ತು ಅಬ್ದುಲ್ ಗಫರ್ ಎಂದು ಗುರುತಿಸಲಾಗಿದೆ.


ಬಸವನಗರ ಠಾಣೆ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಪ್ರೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಮಲು ಬರುವ ಸಿರಪ್ ಬಾಟಲಿಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾದಕ ದ್ರವ್ಯ ನಿಗ್ರಹ ಪಡೆಗೆ ಮಾಹಿತಿ ಲಭಿಸಿತ್ತು. ಈ ಹಿನ್ನಲೆ ಪಿಎಸ್‌ಐ ಸಾಗರ್ ಅತ್ತರವಾಲ್ ಮತ್ತು ತಂಡವು ಎಸ್ಪಿ ಉಮಾಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ದಾಳಿ ವೇಳೆ ಪೊಲೀಸರು 100 ಎಂಎಲ್‌ನ 340 ಬ್ರಾಂಕ್ರಾಫ್ ಸಿ-ಕಫ್ ಸಿರಪ್, 100 ಎಂಎಲ್‌ನ 15 ಇಡಿಎಕ್ಸ್-ಸಿಟಿ ಕಫ್ ಸಿರಪ್ ಬಾಟಲಿಗಳು, 20 ಸಣ್ಣ ಬಾಕ್ಸ್‌ಗಳಲ್ಲಿರುವ ಆಸಿಕ್ಲೋಫೆನಾಕ್, ಪ್ಯಾರಾಸಿಟಮಾಲ್ ಮತ್ತು ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್‌ಗಳು, ಒಂದು ಹೋಂಡಾ ಆಕ್ಟಿವಾ ಬೈಕ್, ಮತ್ತು 1200 ರೂ. ನಗದು ಹಣವನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



