ಕುಂದಾಪುರದಲ್ಲಿ ಕ್ರೇನ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

ಕುಂದಾಪುರ: ಆಯತಪ್ಪಿ ರಸ್ತೆಗೆ ಬಿದ್ದ ಸ್ಕೂಟರ್ ಸವಾರನ ಮೇಲೆ ಕ್ರೇನ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಮೃತ ಯುವಕನನ್ನು ಕುಂದಾಪುರ ತಾಲೂಕಿನ ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಅಭಿಷೇಕ್ ಪೂಜಾರಿ (23) ಎಂದು ಗುರುತಿಸಲಾಗಿದೆ.

ಅಭಿಷೇಕ್ ಪೂಜಾರಿ ಮಣೂರಿನಲ್ಲಿರುವ ತನ್ನ ಮನೆಯಿಂದ ಕೆಲಸದ ನಿಮಿತ್ತ ಕುಂದಾಪುರದ ಕಡೆಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆಯಲ್ಲಿ ಪಲ್ಸರ್ ಸವಾರ ಏಕಾಏಕಿ ಅಡ್ಡಬಂದ ಪರಿಣಾಮ ಅಭಿಷೇಕ್ ರಸ್ತೆಗೆ ಬಿದ್ದಿದ್ದರು.

ಎದ್ದೇಳಬೇಕು ಎನ್ನುವಷ್ಟರಲ್ಲಿಯೇ ಹಿಂದಿನಿಂದ ವೇಗದಿಂದ ಬಂದ ಕ್ರೇನ್ ಮೈ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದರು. ಬಳಿಕ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು
ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಅ.13ರಂದು ಮೃತಪಟ್ಟಿದ್ದಾರೆ.

ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಗೋಪಾಲ ಪೂಜಾರಿ ಹಾಗೂ ವನಜಾ ದಂಪತಿಯ ಮೂವರು ಮಕ್ಕಳಲ್ಲಿ 2ನೇಯವರಾದ ಅಭಿಷೇಕ್ ಕೋಟೇಶ್ವರದ ಅಂಶು ಮೆಡಿಕಲ್‌ನಲ್ಲಿ ಉದ್ಯೋಗಿಯಾಗಿದ್ದರು. ಸರಳತೆ ಸ್ವಭಾವದಿಂದ ಪರಿಸರದವರಿಗೆ ಬಹಳ ಅಚ್ಚುಮೆಚ್ಚಿನವನಾಗಿದ್ದ ಅವರು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಮೃತರು ಹೆತ್ತವರು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *