ಕೊಡಗು: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನವೊಂದು ಪಲ್ಟಿಯಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗಡಿಕಟ್ಟೆ ಬಳಿ ಅ.13ರಂದು ನಡೆದಿದೆ.
ಬೆಳಗ್ಗಿನ ಜಾವ 2:30 ಗಂಟೆಯ ವೇಳೆಗೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಾಹನ ಪಲ್ಟಿಯಾದ ರಭಸಕ್ಕೆ ಮೂರು ಗೋವುಗಳು ಗಾಯಗೊಂಡಿವೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿಯೇ ಆರೋಪಿಗಳ ಕಡೆಯವರು ಇನ್ನೋವಾ ಕಾರಿನಲ್ಲಿ ಬೇರೆಡೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಹಿಂದು ಜಾಗರಣ ವೇದಿಕೆ ಮುಖಂಡ ಬೋಜೆಗೌಡ ಮಾತನಾಡಿದ್ದು ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕ್ರಮ ಕೈಗೊಳ್ಳಬೇಕು. ಇಲ್ಲದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.



