ಮಂಗಳೂರು: ಹೋಲ್‌ಸೇಲ್ ಮಾರಾಟ ಮಳಿಗೆಯೊಂದರಲ್ಲಿ ಇಟ್ಟಿದ್ದ 3.5 ಲಕ್ಷ ರೂ. ನಗದು ಕಳ್ಳತನವಾಗಿರುವ ಘಟನೆ ಅ.10ರಂದು ಸುರತ್ಕಲ್ ಮಾರ್ಕೆಟ್ ಮುಂಭಾಗದಲ್ಲಿ ನಡೆದಿದೆ.

ಎಂದಿನಂತೆ ಇಂದು ಬೆಳಗ್ಗೆ ಅಂಗಡಿ ಮಾಲೀಕರಾದ ಶಮೀರ್ ಅವರು ಅಂಗಡಿ ತೆರೆಯಲು ಬಂದಾಗ ಕಳ್ಳರು ಅಂಗಡಿಯ ಬೀಗ ಮುರಿದು ಹಣ ದೋಚಿರುವುದು ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಶಮೀರ್ ಅವರು ವ್ಯಾಪಾರದ ನಂತರ ದಿನದ ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಇಂದು ಕೆಲವು ಪಾವತಿಗಳನ್ನು ಮಾಡಬೇಕಾಗಿದ್ದರಿಂದ, ನಿನ್ನೆ ರಾತ್ರಿ ಅವರು 3.5 ಲಕ್ಷ ರೂ. ನಗದನ್ನು ಡ್ರಾಯರ್‌ನಲ್ಲಿ ಇರಿಸಿ ಅಂಗಡಿಗೆ ಬೀಗ ಹಾಕಿ ಹೋಗಿದ್ದರು. ಇದೇ ಹಣವನ್ನು ಖದೀಮರು ದೋಚಿದ್ದಾರೆ.

ಈ ಬಗ್ಗೆ ಮಾಲೀಕರು ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಮಳಿಗೆ ಪರಿಶೀಲಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ.



