Breaking
11 Aug 2026, Tue

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿ ಬಂಧನ

ಮಂಗಳೂರು: ಕಳವು ಪ್ರಕರಣದಲ್ಲಿ ಸುಮಾರು ಹತ್ತು ವರ್ಷಗಳಿಂದ ತಲೆಮರೆಸಿಕೊಂಡು ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.


ಬಂಧಿತನನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಂಪಾಡಿ ಗ್ರಾಮದ ಕುಂತಲ್ಪಾಡಿ ನಿವಾಸಿ ಪ್ರಸಾದ್ (33) ಎಂದು ಗುರುತಿಸಲಾಗಿದೆ. ಆತ ಉದಯ ಪೂಜಾರಿ ಅವರ ಪುತ್ರನಾಗಿದ್ದಾನೆ.


ಪೊಲೀಸರ ಮಾಹಿತಿ ಪ್ರಕಾರ, ಪ್ರಸಾದ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 2016ರ ಅಪರಾಧ ಸಂಖ್ಯೆ 289/2016ರ ಅಡಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 379 ಅಡಿಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ವಿಚಾರಣೆಯ ಅವಧಿಯಲ್ಲಿ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ದೀರ್ಘಕಾಲ ಪತ್ತೆಯಾಗದ ಹಿನ್ನೆಲೆ ನ್ಯಾಯಾಲಯವು ಪ್ರಕರಣವನ್ನು ಎಲ್‌ ಪಿ ಸಿ (LPC) ಎಂದು ಪರಿಗಣಿಸಿ ದಾಖಲಿಸಿತ್ತು.


ತನಿಖೆ ವೇಳೆ ಪ್ರಸಾದ್ ವಿರುದ್ಧ ಹಿರಿಯಡ್ಕ, ಕೊಣಾಜೆ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿಯೂ ವಿವಿಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು ಒಂದು ದಶಕದಿಂದ ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೂನ್ 24ರಂದು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Leave a Reply

Your email address will not be published. Required fields are marked *