ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಅಧಿಕೃತ ಮನ್ನಣೆ ಸಿಕ್ಕಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ.

ಆದೇಶದಲ್ಲಿ, ಈ ಮಾನ್ಯತೆಯು ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ. ಅಸೋಸಿಯೇಷನ್ ಪ್ರತಿವರ್ಷ ಜೂ.30ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡವಳಿ ಪ್ರತಿ, ಕ್ಯಾಲೆಂಡರ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ತಿಳಿಸಲಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಅವರು “ಕರಾವಳಿಯ ವಿಶೇಷ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರ್ಕಾರದಿಂದ ಈಗ ಅಧಿಕೃತ ಮನ್ನಣೆ ಸಿಕ್ಕಿದಂತಾಗಿದೆ. ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದೆವು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ” ಎಂದಿದ್ದಾರೆ.

ಈ ಅಸೋಷಿಯೇಷನ್‌ನಲ್ಲಿ 18 ಮಂದಿ ಪದಾಧಿಕಾರಿಗಳಿದ್ದಾರೆ. ಜೀವಂಧರ್ ಬಲ್ಲಾಳ್, ಜೀವನದಾಸ ಅಡ್ಯಂತಾಯ ಹಾಗೂ ಗುಣಪಾಲ ಕಡಂಬ ಗೌರವ ಸಲಹೆಗಾರರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಈ ಅಸೋಸಿಯೇಷನ್ ಕ್ರಮ ವಹಿಸುತ್ತಿದ್ದು, ಕಂಬಳ ಕ್ರೀಡೆಯ ವೇಳಾಪಟ್ಟಿಯನ್ನು ತಯಾರಿಸುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.



