Breaking
22 Mar 2026, Sun

ಮೈಸೂರಿನ ದಸರಾ ವೇಳೆ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ, ಕಾಲಿಗೆ ಗುಂಡು ಹೊಡೆದು ಆರೋಪಿಯ ಬಂಧಿಸಿದ ಪೊಲೀಸರು

ಮೈಸೂರು: ದಸರಾ ಹಬ್ಬದ ವೇಳೆ ಬಲೂನು ಮಾರಾಟ ಮಾಡಲು ಬಂದಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾದ ಘಟನೆ ಮೈಸೂರಿನಲ್ಲಿ ನಡೆದಿದ್ದು ಕಾಲಿಗೆ ಗುಂಡು ಹೊಡೆದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎಂದು ಗುರುತಿಸಲಾಗಿದೆ.

ಗುಲ್ಬರ್ಗ ಮೂಲದ ಅಲೆಮಾರಿ ಕುಟುಂಬವೊಂದು ದಸರಾ ಜಾತ್ರೆಯಲ್ಲಿ ಬಲೂನು ಸೇರಿದಂತೆ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಮೈಸೂರಿಗೆ ಆಗಮಿಸಿತ್ತು. ಮಳೆ ಬಂದ ಕಾರಣ ಮುಂಜಾನೆ ಎದ್ದು ನೋಡಿದಾಗ ಬಾಲಕಿ ನಾಪತ್ತೆಯಾಗಿದ್ದಳು. ಈ ವೇಳೆ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರ ತಂಡ ತಕ್ಷಣವೇ ಹುಡುಕಾಟ ಆರಂಭಿಸಿದ್ದು, ಟೆಂಟ್ ನ ಕೆಲವೇ ದೂರದಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿತ್ತು.

ಘಟನೆ ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ ಎಂಬಾತನ ಸುಳಿವು ಸಿಕ್ಕಿದೆ. ಕೃತ್ಯ ಎಸಗಿದ್ದ ವಿಕೃತ ಕಾಮುಕ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಮೈಸೂರು ಪೊಲೀಸರ ತಂಡ ಕೊಳ್ಳೇಗಾಲಕ್ಕೆ ತೆರಳಿದೆ.

ಮೆಟಗಳ್ಳಿ ಬಳಿ ಆರೋಪಿ ಕಾರ್ತಿಕ್ ನನ್ನು ಸುತ್ತುವರಿದಾಗ, ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ತಕ್ಷಣವೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಇತ್ತ ಮೈಸೂರು ಪೊಲೀಸರ ಕ್ಷಿಪ್ರ ಮತ್ತು ದಿಟ್ಟ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *