Breaking
22 Mar 2026, Sun

ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ, ನಾಲ್ವರ ಬಂಧನ,ಇನ್ನುಳಿದ ಆರೋಪಿಗಳಿಗೆ ಶೋಧ

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಓರ್ವ ಆರೋಪಿ ಮಹಾರಾಷ್ಟ್ರ ಮೂಲದವನಾಗಿದ್ದು ತನಿಖಾ ದೃಷ್ಟಿಯಿಂದ ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡಿದ ಬಿಹಾರ ರಾಜ್ಯದ ಸಮಸ್ತಿಪುರದ ರಾಕೇಶಕುಮಾರ ಸಹಾನಿ(22), ರಾಜುಕುಮಾರ ಪಾಸ್ವಾನ(21), ಮತ್ತು ರಕ್ಷಕಕುಮಾರ ಮಾತೊ(21) ಎಂಬುವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಇಲ್ಲಿಯವರೆಗೆ ಒಟ್ಟು 9.01 ಕೆ.ಜಿ ಬಂಗಾರ ಹಾಗೂ ರೂ. 86,31,220 ನಗದನ್ನು ವಶ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನುಳಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ದರೋಡೆ ಮಾಡಿದ್ದ ಇನ್ನುಳಿದ ಚಿನ್ನಾಭರಣ, ನಗದು ಹಣ ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ.

ಮಹಾರಾಷ್ಟ್ರದ ಮುಖ್ಯ ಆರೋಪಿಯು ಬ್ಯಾಂಕ್ ದರೋಡೆಗೂ ಮುನ್ನಾ ಹಲವಾರು ಬಾರಿ ಬ್ಯಾಂಕಿಗೆ ಬಂದು ಒಳ-ಹೊರಗೆ ಪರಿಶೀಲನೆ ಮಾಡಿಕೊಂಡು ಹೋಗಿದ್ದಾನೆ. ಅಲ್ಲದೇ, ಬ್ಯಾಂಕ್ ದರೋಡೆ ಮಾಡಲು ಮಂಗಳವೇಡಾದಲ್ಲಿ ಒಂದು ಕಾರನ್ನು ಕಳವು ಮಾಡಿ, ಅದನ್ನು ಕೃತ್ಯಕ್ಕೆ ಬಳಸಿದ್ದ. ಆರೋಪಿಯನ್ನು ಅ.7ರಂದು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಲಾಗಿದೆ. ಈತನಿಂದ 55 ಗ್ರಾಂ ಬಂಗಾರದ ಬಳೆಗಳು ಹಾಗೂ ಕೃತ್ಯಕ್ಕೆ ಬಳಸಿದ 1 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ: ಕಳೆದ ಸೆಪ್ಟೆಂಬರ್ 16ರಂದು ಮೂರು ಜನ ಅಪರಿಚಿತ ವ್ಯಕ್ತಿಗಳು ಮಾಸ್ಕ್ ಧರಿಸಿಕೊಂಡು ಬಂದು ಖಾತೆ ತೆರೆಯುವ ನೆಪದಲ್ಲಿ ಬ್ಯಾಂಕಿನೊಳಗೆ ಪ್ರವೇಶಿಸಿ, ನಂತರ ಪಿಸ್ತೂಲ್ ಮತ್ತು ಚಾಕುಗಳನ್ನು ತೋರಿಸಿ ಬ್ಯಾಂಕ್ ಸಿಬ್ಬಂದಿಯನ್ನು ಕಟ್ಟಿಹಾಕಿ, ಬ್ಯಾಂಕಿನ ಸ್ಟ್ರಾಂಗ್ ರೂಮ್ನಲ್ಲಿದ್ದ ಸುಮಾರು ರೂ. 1.04 ಕೋಟಿ ನಗದು ಮತ್ತು 20 ಕೆ.ಜಿ. ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು.

Leave a Reply

Your email address will not be published. Required fields are marked *