ಮಂಗಳೂರು: ತೊಕ್ಕೊಟ್ಟು ಸಮೀಪದ ತಲಪಾಡಿಯ ದೇವಿಪುರ ರಸ್ತೆಯ ಫಾರ್ಮ್‌ನ ಪೊದೆಗಳಲ್ಲಿ ವ್ಯಕ್ತಿಯೋರ್ವರ ಮೃತದೇಹದ ಕಳೇಬರ ಪತ್ತೆಯಾಗಿದ್ದು, ನೇಣುಬಿಗಿದು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ಧರಿಸಿದ್ದ ಪ್ಯಾಂಟ್ ನಲ್ಲಿ ಮೊಬೈಲ್ ಪತ್ತೆಯಾಗಿದೆ. ಇದರ ಆಧಾರದಲ್ಲಿ ಮೃತದೇಹದ ಗುರುತು ಪತ್ತೆ ಹಚ್ಚಲಾಗಿದ್ದು ಬಿಹಾರ ಮೂಲದ ರಾಹುಲ್ ಕುಮಾರ್ ಎಂದು ಅನುಮಾನಿಸಿದ್ದಾರೆ.

ಎರಡು ತಿಂಗಳ ಹಿಂದೆ ಕಾಸರಗೋಡು ಮಂಜೇಶ್ವರ ಕುಂಜತ್ತೂರಿನಿಂದ ನಾಪತ್ತೆಯಾಗಿದ್ದ ಈತನ ಬಗ್ಗೆ ಆ.7 ರಂದು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೇಬರ ಸಿಕ್ಕ ಸ್ಥಳದ ಮರದಲ್ಲಿ ನೈಲಾನ್ ಹಗ್ಗದ ನೇಣಿನ ಕುಣಿಕೆ ಇದ್ದು, ಅದರಲ್ಲಿ ಹೆಡ್ ಫೋನ್ ಮತ್ತು ಎಲುಬುಗಳು ನೇತಾಡುತ್ತಿತ್ತು. ಹಸಿರು ಟೀ ಶರ್ಟ್ ಹಾಗೂ ಲುಂಗಿಯೊಂದು ಮರದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಕಂಡುಬಂದಿದೆ.

ಎಫ್‌ಎಸ್‌ಎಲ್ ವರದಿ ಬಂದ ಬಳಿಕವೇ ಮೃತರ ಅಧಿಕೃತ ಗುರುತು ಪತ್ತೆಯಾಗಲಿದೆ. ಉಳ್ಳಾಲ ಪೊಲೀಸರು ಮತ್ತು ಸೋಕೊ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಬುರುಡೆ, ಎಲುಬುಗಳು ಮತ್ತು ಇತರ ಅವಶೇಷಗಳನ್ನು ಸಂಸ್ಕರಿಸಿ ಎಫ್‌ಎಸ್‌ಎಲ್ ಪರಿಶೀಲನೆಗೆ ಕಳುಹಿಸಿದ್ದಾರೆ.



