Breaking
22 Mar 2026, Sun

ಕಾಂತಾರ – 1 ಸಿನಿಮಾದ ಕುರಿತಾಗಿ ನಟ, ನಿರ್ದೇಶಕ ರಿಷಬ್ಗೆ ಪತ್ರ ಬರೆದ ತುಳುಕೂಟ

ಬೆಂಗಳೂರು: 2022ರಲ್ಲಿ ‘ಕಾಂತಾರ’ ರಿಲೀಸ್ ಬಳಿಕ ಆರ್ಕೆಸ್ಟ್ರಾಗಳಲ್ಲಿ, ಖಾಸಗಿ ಕಾರ್ಯಕ್ರಮಗಳಲ್ಲಿ, ಟಿವಿ ಶೋಗಳಲ್ಲಿ ದೈವದ ಅನುಕರಣೆ ಮಾಡಲಾಗುತ್ತಿತ್ತು. ತುಳುನಾಡಿನ ನಂಬಿಕೆ, ಆಚರಣೆಯ ಭಾಗವಾಗಿರುವ ದೈವಗಳ ಅನುಕರಣೆ ಮಾಡುವ ವಿಚಾರಕ್ಕೆ ಹಲವರು ಅಸಮಾಧಾನ ಹೊರಹಾಕಿದ್ದರು. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಣೆ ವೇಳೆಯೂ ಕೆಲವರು ದೈವಗಳು ಆವೇಶ ಬಂದಂತೆ ವರ್ತಿಸುತ್ತಿರುವ ಘಟನೆಗಳು ನಡೆಯುತ್ತಿರುವುದು ಇದು ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ತುಳುಕೂಟ ನಟ ರಿಷಬ್ ಶೆಟ್ಟಿಗೆ ಪತ್ರವೊಂದನ್ನು ಬರೆದಿದ್ದು ರಿಷಬ್ ಶೆಟ್ಟಿ ಅವರೇ ನೀವು ದೈವಗಳಲ್ಲಿ ಅಪಾರ ನಂಬಿಕೆ ಇರುವವರು ಎಂದು ಹಲವು ಬಾರಿ ಹೇಳಿಕೊಂಡಿದ್ದೀರಿ. ನೀವು ದೈವದ ಬಗ್ಗೆ ಸಿನಿಮಾ ಮಾಡಿದ್ದೀರಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ನಿಮ್ಮ ಸಿನಿಮಾ ನೋಡುವ ಅಭಿಮಾನಿಗಳಿಗೆ ದೈವದ ಬಗ್ಗೆ ಜಾಗೃತಿ ಮೂಡಿಸಿ. ಕಾಂತಾರ ಬಂದಾಗಿನಿಂದಲೂ ದೈವದ ಅನುಕರಣೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ದೈವದ ವೇಷ ಧರಿಸಿ ಚಿತ್ರಮಂದಿರಕ್ಕೆ ಬಂದ ವಿಡಿಯೋ ವೈರಲ್ ಆಗಿತ್ತು. ಸಿನಿಮಾ ನೋಡುವಾಗಲೇ ಕೆಲ ಪ್ರೇಕ್ಷಕರು ದೈವ ಬಂದವರಂತೆ ವರ್ತಿಸಿದ್ದಾರೆ. ಇನ್ನು ಕೆಲವರು ಚಿತ್ರಮಂದಿರದಿಂದ ಹೊರಬಂದಾಗ ಕೂಗಾಡಿದ ವಿಡಿಯೋಗಳು ವೈರಲ್ ಆಗಿವೆ ಎಂದು ಬರೆದಿದ್ದಾರೆ.

ದಿನಬೆಳಗಾದರೆ ಇಂಥಹಾ ವಿಡಿಯೋಗಳನ್ನು ನೋಡಿ ನಾವು ರೋಸಿ ಹೋಗಿದ್ದೇವೆ. ಇವೆಲ್ಲವನ್ನೂ ನೋಡಿ ನೀವೇಕೆ ಮೌನವಾಗಿದ್ದೀರಿ ಎಂಬುದು ತಿಳಿಯುತ್ತಿಲ್ಲ. ಸಿನಿಮಾ ಪ್ರದರ್ಶನಕ್ಕೆ ಮುಂಚೆ ಈ ಬಗ್ಗೆ ಒಂದು ಡಿಸ್ ಕ್ಲೇಮರ್ (ಎಚ್ಚರಿಕೆ) ಹಾಕಿ ಎಂದು ಈ ಹಿಂದೆಯೇ ಮನವಿ ಮಾಡಿದ್ದೆವು. ಆದರೆ ಈ ಬಗ್ಗೆ ನಿಮಗೆ ಯಾಕೆ ಅಷ್ಟೋಂದು ನಿರ್ಲಕ್ಷ್ಯವೋ ತಿಳಿಯುತ್ತಿಲ್ಲ. ದೈವಾರಾದನೆ ನಮ್ಮ ನಂಬಿಕೆ. ಕೂಡಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಜಾಗೃತಿ ಮೂಡಿಸಿ ಜೊತೆಗೆ ಸಿನಿಮಾ ಪ್ರದರ್ಶನಕ್ಕೆ ಮುಂಚೆ ಡಿಸ್ ಕ್ಲೇಮರ್ ಹಾಕಿ ಎಂದು ತುಳುಕೂಟ ಒತ್ತಾಯಿಸಿದೆ.

Leave a Reply

Your email address will not be published. Required fields are marked *