ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಪಟಾಕಿ ಮಾರಾಟ ಮಳಿಗೆಗಳು ಅಲ್ಲಲ್ಲಿ ತೆರೆಯಲು ಆರಂಭವಾಗುತ್ತಿದೆ. ಈ ನಡುವೆ ಪಟಾಕಿ ಮಾರಾಟಗಾರರಿಗೆ ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆಯ ಕರೆಯೊಂದನ್ನು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, “ದೀಪಾವಳಿಯಲ್ಲಿ ಹಸಿರು ಪಟಾಕಿ” ಮಾತ್ರ ಹಚ್ಚಬೇಕೆಂದು ಸುಪ್ರೀಂ ಕೋರ್ಟ್ ಕೂಡ ಆದೇಶಿಸಿದೆ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಭಾರ ಇರುವ, ಲೋಹ ಭರಿತ ಪಟಾಕಿ ಬಳಕೆ ಆಗುತ್ತಿದೆ. ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದೇನೆ. ಯಾವುದೇ ಹಸಿರು ಪಟಾಕಿ ಬಿಟ್ಟು ಬೇರೆಯದಕ್ಕೆ ಅವಕಾಶ ಕೊಡಬಾರದು. ಮಳಿಗೆಗಳಿಗೆ ಹೋಗಿ ಪರಿಶೀಲನೆ ಮಾಡಬೇಕು. ಪರಿಸರ ಸ್ನೇಹಿ ಪಟಾಕಿ ಮಾಡುತ್ತೇವೆ ಅಂತ ಮುಚ್ಚಿಳಿಕೆ ಬರೆದು ಕೊಟ್ಟಿದ್ದಾರೆ.

ಯಾರಾದರೂ ನಿಯಮ ಉಲ್ಲಂಘಿಸಿ ಪಟಾಕಿ ಮಾರಿದರೆ ಅವರ ಲೈಸೆನ್ಸ್ ರದ್ದು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಪಟಾಕಿ ಮಳಿಗೆಯವರು ಯಾವುದೇ ಕಾರಣಕ್ಕೂ ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯವರು ಒಟ್ಟಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲು ಮನವಿ ಮಾಡುತ್ತೇನೆ. ಅಧಿಕಾರಿಗಳು ಪರಿಸರ, ಪ್ರಕೃತಿಯನ್ನ ಕಟ್ಟುನಿಟ್ಟಾಗಿ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ, ಪರಿಸರ ಕೊಡಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.



