Breaking
11 May 2026, Mon

ಶಿರ್ಲಾಲು ಹಟ್ಟಿಯಿಂದ ದನ ಕಳ್ಳತನ ಪ್ರಕರಣ, ಮೂವರು ಆರೋಪಿಗಳ ಬಂಧನ

ಕಾರ್ಕಳ : ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಜಯಶ್ರೀ ಎಂಬಾವರಿಗೆ ತಲವಾರು ಝಳಪಿಸಿ ಅವರ ಮನೆಯ ಕೊಟ್ಟಿಗೆಯಿಂದ ದನ ಕಳ್ಳತನಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಲ್ಲೂರು ಗ್ರಾಮದ ಬೋರ್ಕಟ್ಟೆ ದಡ್ಡಕಜೆಯ ಮೊಹಮ್ಮದ್ ಯೂನಿಸ್ (31), ಮೂಡುಬಿದ್ರೆ ತಾಲೂಕು ಕಲ್ಲಬೆಟ್ಟು ಗ್ರಾಮದ ನೀರಲ್ಕೆ ಮೊಹಮ್ಮದ್ ನಾಸೀರ್ (28) ಹಾಗೂ ಮಿಜಾರು ಹಂಡೇಲು ಮನೆ ಮೊಹಮ್ಮದ್ ಇಕ್ಬಾಲ್ (29) ಎಂಬವರನ್ನು ಅ. 5ರಂದು ಬಂಧಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಲಾಗುವ 2 ತಲುವಾರು, 5 ಮೊಬೈಲ್, ಮಾರುತಿ ಸ್ವಿಫ್ಟ್ ಹಾಗೂ ಮಹೇಂದ್ರ ಬೋಲೆರೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿರುತ್ತಾರೆ.

ಸೆ. 28ರಂದು ರಾತ್ರಿ 2 ಗಂಟೆಯ ಸುಮಾರಿಗೆ ಜಯಶ್ರೀ ಅವರ ಮನೆಯ ದನದ ಕೊಟ್ಟಿಗೆಯಿಂದ ಅಂದಾಜು 35 ಸಾವಿರ ರೂ. ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿದ್ದು ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಬಂಧಿತರಲ್ಲಿ ಮೊಹಮ್ಮದ್ ನಾಸೀರ್ ವಿರುದ್ಧ ಈಗಾಗಲೇ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಠಾಣೆಗಳಲ್ಲಿ ಒಟ್ಟು 11 ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ಯೂನಿಸ್ ವಿರುದ್ಧ ಕಾರ್ಕಳ ಹಾಗೂ ಬಜ್ಪೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಜೆಕಾರು ಠಾಣೆಯ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ., ಹೆಬ್ರಿ ಠಾಣೆಯ ಸುಜೀತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಮಹಾಂತೇಶ್, ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ, ಶಶಿಕುಮಾರ್, ಎಸ್‌ಪಿ ಕಚೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಮತ್ತು ನಿತೀನ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *