ಕಾಸರಗೋಡು: ಮಾನಸಿಕ ಅಸ್ವಸ್ಥತೆಯ ಲಕ್ಷಣಗಳನ್ನು ತೋರಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ವಯೋವೃದ್ಧ ಮಾವನನ್ನೇ ಥಳಿಸಿ ಕೊಂದ ದಾರುಣ ಘಟನೆ ಕಾಸರಗೋಡುವಿನ ನೀಲೇಶ್ವರ ಕಿನನೂರು-ಕರಿಂತಲಂ ಪಂಚಾಯತ್ ವ್ಯಾಪ್ತಿಯ ಕುಂಬಳಪಳ್ಳಿಯಲ್ಲಿ ಅ.5 ರಂದು ಸಂಜೆ ನಡೆದಿದೆ.


ಕುಂಬಳಪಳ್ಳಿಯ ಚಿತ್ತಮೂಲ ಉನ್ನತಿ ಮೂಲದ ನಿವಾಸಿ ಕೆ. ಕಣ್ಣನ್ (80) ಕೊಲೆಗೀಡಾದ ವ್ಯಕ್ತಿಯಾಗಿದ್ದಾನೆ. ಇವರ ಸೋದರಳಿಯ, ನೆರೆಮನೆಯ ಆರೋಪಿ ಕೆ. ಶ್ರೀಧರನ್ (45) ಅವರನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.
ಈತ ಕೆಲವು ದಿನಗಳ ಹಿಂದೆ ಆರೋಪಿ ಮನೆಯ ಟೆರೇಸ್ ಹತ್ತಿ ಪರೋಟಾ, ಬೀಪ್ ಗಸಿ ಕೊಡದಿದ್ದರೆ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ್ದ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಭಾನುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಕಣ್ಣನ್ ಮನೆಯಲ್ಲಿದ್ದಾಗ ಶ್ರೀಧರನ್ ಅವರಿಗೆ ಕೋಲಿನಿಂದ ಹಿಂಭಾಗದಿಂದ ಹಲ್ಲೆ ನಡೆಸಿದ್ದಾನೆ. ಆ ಸಮಯದಲ್ಲಿ ಕಣ್ಣನ್ ಹಾಗೂ ಅವರ ಪತ್ನಿ ಪುತರಿಚಿ ಮಾತ್ರ ಮನೆಯಲ್ಲಿ ಇದ್ದರು. ತಲೆಯ ಹಿಂಭಾಗಕ್ಕೆ ಬಿದ್ದ ಗಾಯ ಸಣ್ಣದೆಂದು ಭಾವಿಸಿ, ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿರಲಿಲ್ಲ.

ಆದರೆ ಒಂದು ಗಂಟೆಗೂ ಹೆಚ್ಚು ಸಮಯದ ನಂತರ ಮನೆಗೆ ಬಂದ ಮತ್ತೊಬ್ಬ ಸಂಬಂಧಿ ಗಾಯದ ಗಂಭೀರತೆಯನ್ನು ಗಮನಿಸಿ ಕಣ್ಣನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ದಾರಿಯಲ್ಲಿಯೇ ಕಣ್ಣನ್ ಪ್ರಾಣ ಕಳೆದುಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೆರೆಹೊರೆಯವರು ಹೇಳುವಂತೆ, ಶ್ರೀಧರನ್ ಆಗಾಗ್ಗೆ ತೆಂಗಿನ ಮರ ಹತ್ತಿ ಪಕ್ಕದ ಮನೆಗಳ ಟೆರೇಸ್‌ಗಳಿಗೆ ಹಾರುತ್ತಿದ್ದ. ಈ ನಡವಳಿಕೆಯನ್ನು ಜನರು “ವಿಲಕ್ಷಣ ಆದರೆ ಅಪಾಯಕಾರಿಯಲ್ಲದ” ಎಂದೇ ಪರಿಗಣಿಸುತ್ತಿದ್ದರು.
ಭಾನುವಾರದ ದಾಳಿಯ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಕಣ್ಣನ್ ತಮ್ಮ ಪತ್ನಿ ಹಾಗೂ ಪುತ್ರರಾದ ಶಶಿ, ಚಂದ್ರನ್ ಮತ್ತು ಜಯನ್ ಅವರನ್ನು ಅಗಲಿದ್ದಾರೆ.


