ಬೆಂಗಳೂರು: ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಕಳೆದ ತಿಂಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿಯರು ಸೇರಿದಂತೆ 67 ಮಂದಿಯನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಂಗಳವಾರ ತಿಳಿಸಿದ್ದಾರೆ.
ನಗರದಲ್ಲಿ ಡ್ರಗ್ಸ್ ದಂಧೆ, ಮಾದಕ ದ್ರವ್ಯ ಸಾಗಣೆ ಅಥವಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಅಪರಾಧಿಗಳನ್ನು ಗುರುತಿಸಲು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನಗರದ ಪ್ರತಿಯೊಂದು ಭಾಗದಲ್ಲೂ ದಾಳಿ ನಡೆಸಲಾಗುವುದು ಎಂದು ಅವರು ಹೇಳಿದರು.
ಸೆಪ್ಟೆಂಬರ್‌ನಲ್ಲಿ, ನಗರ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ 40 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಸುಮಾರು 67 ಜನರನ್ನು ಬಂಧಿಸಿದ್ದಾರೆ, ಅದರಲ್ಲಿ ಮೂವರು ವಿದೇಶಿಗರಿದ್ದಾರೆ. ಬಂಧಿತರಿಂದ 170 ಕೆಜಿ ಗಾಂಜಾ, 2 ಕೆಜಿ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ‘ಎಂಡಿಎಂಎ’ ಮತ್ತು 998 ‘ಎಕ್ಸ್ಟಸಿ’ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಪ್ರತಿನಿತ್ಯ ನಗರದ ಪ್ರತಿಯೊಂದು ಭಾಗದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಗುರುತಿಸುವುದರ ಜೊತೆಗೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ. ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವ ವಿದೇಶಿಯರನ್ನೂ ಗಡಿಪಾರು ಮಾಡುತ್ತಿದ್ದೇವೆ. 2024ರಲ್ಲಿ ಬೆಂಗಳೂರಿನಲ್ಲಿ ಮಾದಕ ದ್ರವ್ಯ ದಂಧೆಗಾಗಿ ಸುಮಾರು 80 ವಿದೇಶಿಗರನ್ನು ಅವರ ದೇಶಗಳಿಗೆ ಗಡೀಪಾರು ಮಾಡಲಾಗಿದೆ ಎಂದು ಅವರು ಹೇಳಿದರು. ಇತ್ತೀಚಿಗೆ ಹೆಚ್ ಎಸ್ ಆರ್ ಲೇಔಟ್ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾದ 28 ಕೆಜಿ ಗಾಂಜಾವನ್ನು ತಮಿಳುನಾಡಿನಿಂದ ಪೂರೈಕೆಯಾಗಿತ್ತು ಎಂಬುದು ತಿಳಿದುಬಂದಿದ್ದು, ತಮಿಳುನಾಡಿನ ಮುಖ್ಯ ಪೂರೈಕೆದಾರ ಯಾರು ಮತ್ತು ಅವರು ಹೇಗೆ ಸರಬರಾಜು ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ದಯಾನಂದ್ ತಿಳಿಸಿದರು.