ಕಾರ್ಕಳ: ಪ್ರೀತಿಯ ಕಾರಣಕ್ಕೆ ಮನೆ ಬಿಟ್ಟು ಹೋಗುವುದಾಗಿ ತಿಳಿಸಿದ್ದ ಮಗಳನ್ನು ತಾಯಿಯೇ ಹತ್ಯೆ ಮಾಡಿದ ಮನಕಲಕುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ನಡೆದಿದೆ.
ಮೃತ ಯುವತಿಯನ್ನು ಶಿಫನಾಝ್ (17) ಎಂದು ಗುರುತಿಸಲಾಗಿದೆ.

ಆರೋಪಿಯಾದ ತಾಯಿ ಗುಲ್ಝಾರ್ ಬಾನು (45) ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸೆಪ್ಟೆಂಬರ್ 20ರಂದು ತಾಯಿ ಗುಲ್ಝಾರ್ ಬಾನು ಮತ್ತು ಮಗಳು ಶಿಫನಾಝ್ ನಡುವೆ ಪ್ರೀತಿಯ ವಿಚಾರವಾಗಿ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ, ಶಿಫನಾಝ್ನ ತಂದೆ ಶೇಖ್ ಮುಸ್ತಫಾ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಶಿಫನಾಝ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಬಳಿಕ ಪೊಲೀಸರು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ. ಈ ವೇಳೆ ತಾನು ಕೊಲೆ ಮಾಡಿರುವ ವಿಚಾರವನ್ನು ಗುಲ್ಝಾರ್ ಬಾನು ಒಪ್ಪಿಕೊಂಡಿದ್ದಾಳೆ.

ಅ. 2 ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



