ಬಂಟ್ವಾಳ: ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಹನುಮಾನ ನಗರದ ಮಾವಂತೂರು ದೇವಪ್ಪ ಶೆಟ್ಟಿ ಸಭಾಂಗಣದಲ್ಲಿ 23 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.1ರಿಂದ ಆರಂಭವಾಗಿ 2ರತನಕ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಸೆ. 21 ರಂದು ನಡೆಯಿತು.

ಈ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಂ. ದುರ್ಗಾದಾಸ್ ಶೆಟ್ಟಿ ಅವರು ಅ.1ರಂದು ಬೆಳಿಗ್ಗೆ ಗಣಯಾಗ ಸಹಿತ ಚಂಡಿಕಾಯಾಗ ಮತ್ತು ಶಾರದೆ ವಿಗ್ರಹ ಪ್ರತಿಷ್ಠೆಗೊಳ್ಳಲಿದ್ದು, ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು. ಅ.2ರಂದು ಬೆಳಿಗ್ಗೆ ಗಂಟೆ 9.30ರಿಂದ ನೂರಾರು ಮಂದಿ ಗಣವೇಷಧಾರಿ ಸ್ವಯಂ ಸೇವಕರಿಂದ ‘ಆರ್ ಎಸ್ ಎಸ್ ಶತಾಬ್ಧಿ ವಿಜಯ ದಶಮಿ ಉತ್ಸವ’ ನಡೆಯಲಿದೆ. ಅಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮುರಳಿಕೃಷ್ಣ ಹಂಸತಡ್ಕ ದಿಕ್ಸೂಚಿ ಭಾಷಣ ಮಾಡಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನಪರಿಷತ್ ದಸ್ಸಯ ಕಿಶೋರ್ ಕುಮಾರ್ ಬೊಟ್ಯಾಡಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದ್ದು, ಸಂಜೆ ಗಂಟೆ 5.30ರಿಂದ ಆಕರ್ಷಕ ಶೋಭಾಯಾತ್ರೆ ಬಳಿಕ ಸ್ಥಳೀಯ ಕುದ್ಮಾಣಿ ಹೊಳೆಯಲ್ಲಿ ವಿಸರ್ಜನೆಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಪುರೋಹಿತ ರಾಜಾರಾಮ ಭಟ್, ಸಮಿತಿ ಅಧ್ಯಕ್ಷ ದಿನೇಶ ಶೆಟ್ಟಿ ಮಡಂದೂರು, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಸತೀಶ್ ಬಾಡಬೆಟ್ಟು, ಟ್ರಸ್ಟಿ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ರಮಾನಾಥ ರಾಯಿ, ರಾಘವ ಅಮೀನ್, ಮಧುಕರ ಬಂಗೇರ, ಜಯಂತ ಬೊಲ್ಪೊಟ್ಟು, ಮನೋಹರ ಕೊಯಿಲ, ಸುರೇಂದ್ರ ಕುಲಾಲ್, ಜಿ.ದಾಮೋದರ ಬಂಗೇರ, ಚಂದ್ರಶೇಖರ ಗೌಡ ಕಾರಂಬಡೆ, ಪ್ರವೀಣ್ ಅಂಚನ್ ಕೊಯಿಲ, ಹರೀಶ ಆಚಾರ್ಯ ರಾಯಿ, ಕೆ.ಪರಮೇಶ್ವರ ಪೂಜಾರಿ ರಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


