ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಚಂಡಿಕಾ ಹೋಮ, ಧಾರ್ಮಿಕ ಸಭೆ ನಡೆಯಿತು.
ಆಶೀರ್ವಚನ ನೀಡಿದ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, “ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಶ್ರೇಷ್ಠತೆ ಇದೆ. ಭಕ್ತಿ ಭಾವದಿಂದ ಪರಿಶುದ್ಧವಾಗಿ ಪ್ರಾರ್ಥಿಸಿದವರಿಗೆ ದೇವಿ ಪ್ರತಿಫಲ ನೀಡುತ್ತಾಳೆ. ಮಕ್ಕಳನ್ನು ಸಂಸ್ಕಾರಯುಕ್ತರನ್ನಾಗಿ ಬೆಳೆಸ ಬೇಕಾದ ಅವಶ್ಯಕತೆಯಿದೆ. ಕ್ಷೇತ್ರದ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕೆ ಸರ್ವ ಭಕ್ತರ ಸಹಕಾರ ನಮ್ಮ ವಿನಂತಿ ಎಂದು ತಿಳಿಸಿದರು”.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ದ.ಕ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, “ಆಡಂಬರ ಇದ್ದಲ್ಲಿ ಭಕ್ತಿ ಇರುವುದಿಲ್ಲ. ಸಂಸ್ಕಾರಯುಕ್ತ ಬದುಕಿನ ಉದ್ದೇಶದಿಂದ ದೇವಾಲಯಗಳು ಸ್ಥಾಪಿಸಲ್ಪಟ್ಟಿವೆ. ದೇವರ ಸಾನ್ನಿಧ್ಯಗಳ ಮೂಲಕ ಹಿಂದೂ ಧರ್ಮ, ಸಂಸ್ಕೃತಿ ಉಳಿಯಬಹುದು. ಸ್ವಧರ್ಮೀಯರಿಂದಲೇ ಧರ್ಮಾಂಧತೆ ಬೆಳೆಯುತ್ತಿರುವುದು ಖೇದಕರ. ಮಕ್ಕಳಲ್ಲಿ ಐಶ್ವರ್ಯ ಕ್ರೋಢೀಕರಣ ಮನೋಭಾವ ಬೆಳೆಸದೇ ಪರೋಪಕಾರಿಯಾಗಿ ಬಾಳುವಂತೆ ಪ್ರೇರೇಪಿಸುವುದು ಹೆತ್ತವರ ಕರ್ತವ್ಯ ಎಂದು ತಿಳಿಸಿದರು”.
ಧಾರ್ಮಿಕ ಮುಖಂಡ ಡಾ.ಜಿ.ಬಿ.ಮೊಗಸಾಲೆ ಆಗಮ ಶಾಸ್ತ್ರ, ಬ್ರಹ್ಮಕಲಶ, ಧಾರ್ಮಿಕ ವಿಧಿ ವಿಚಾರಗಳ ಬಗ್ಗೆ ಮಾತನಾಡಿದರು.ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯೆ ಮಲ್ಲಿಕಾ ಪಕ್ಕಳ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಮಂಗಳೂರು ಉದ್ಯಮಿ ಜನಾರ್ದನ ಪೂಜಾರಿ ಪದ್ದಡ್ಕ ಭಾಗವಹಿಸಿದ್ದರು.
ಶ್ರೀ ಚಾಮುಂಡೇಶ್ವರಿ ದೇವಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸ್ವಾಗತಿಸಿದರು. ದೀಕ್ಷಿತ್ ಕಣಿಯೂರು ವಂದಿಸಿದರು.ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ನಡಿಬೈಲು ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಿತು.