Breaking
24 Mar 2026, Tue

ವಿಜಯಪುರದಲ್ಲಿ ಗಂಡನ ಕೊಲೆ ಯತ್ನ ಪ್ರಕರಣ: ಪತ್ನಿಯ ಪ್ರಿಯಕರ ಆತ್ಮಹತ್ಯೆ

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಪತಿಯ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು ಪ್ರಿಯಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಸಿದ್ದಪ್ಪ ಕ್ಯಾತನಕೇರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾನೆ.

ಗ್ರಾಮದ ಹೊರವಲಯದ ಮರದಲ್ಲಿ ಬುಧವಾರ ರಾತ್ರಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು,ಮರ‍್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಆತನ ಕುಟುಂಬಸ್ಥರು ಝಳಕಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದು,ತನಿಖೆ ಮುಂದುವರೆಸಿದ್ದಾರೆ.

ಏನಿದು ಘಟನೆ..?

ಅಂಜುಟಗಿ ಗ್ರಾಮದ ಬೀರಪ್ಪ ಪೂಜಾರಿ ಎಂಬಾತನ ಪತ್ನಿ ಸುನಂದಾ ಪೂಜಾರಿ ಜತೆಗೆ ಸಿದ್ದಪ್ಪ ಕ್ಯಾತನಕೇರಿ ಸಂಬಂಧ ಹೊಂದಿದ್ದ. ಈ ವಿಷಯ ಭೀರಪ್ಪ ಪೂಜಾರಿಗೆ ಗೊತ್ತಾಗಿ ತನ್ನ ಪತ್ನಿಗೆ ಬೈದು ಬುದ್ಧಿ ಹೇಳಿದ್ದ. ಆದರೂ, ಇಬ್ಬರ ನಡುವೆ ಸಂಬಂಧ ಮುಂದುವರೆದಿತ್ತು ಎನ್ನಲಾಗಿದೆ.

ಆ.13 ಮತ್ತು ಸೆ.1ರಂದು ರಾತ್ರಿ ಬೀರಪ್ಪ ಮನೆಯಲ್ಲಿ ಮಲಗಿದ್ದಾಗ ಪತ್ನಿ ಸುನಂದಾಳ ಕುಮ್ಮಕ್ಕಿನ ಮೇರೆಗೆ ಸಿದ್ದಪ್ಪ ಕ್ಯಾತನಕೇರಿ ಹಾಗೂ ಮತ್ತೋರ್ವ ಸೇರಿಕೊಂಡು ಬೀರಪ್ಪನ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದರು.

ಈ ಬಗ್ಗೆ ಸುನಂದಾ ಪೂಜಾರಿ ಹಾಗೂ ಸಿದ್ದಪ್ಪ ಕ್ಯಾತನಕೇರಿ ಸೇರಿದಂತೆ ಮೂರು ಜನರ ವಿರುದ್ಧ ಬೀರಪ್ಪ ಸೆ.4ರಂದು ಇಂಡಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ದೂರಿನ ಆಧಾರದ ಮೇಲೆ ಸುನಂದಾಳನ್ನು ಪೊಲೀಸರು ಬಂಧಿಸಿದ್ದರು.

Leave a Reply

Your email address will not be published. Required fields are marked *