ಪಡುಬಿದ್ರೆ: ವಾಹನ ಹತ್ತಿಸಿ ಪೊಲೀಸರ ಹತ್ಯೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಬಂಧಿತ ಆರೋಪಿಗಳಾಗಿದ್ದಾರೆ.

ದನ ಕಳವು ಪ್ರಕರಣ ಒಂದರಲ್ಲಿ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗಾಗಿ ಕಾಯುತ್ತಿರುವಾಗ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ಕಾರಿನಲ್ಲಿ ಬಂದ ಆರೋಪಿಗಳು ಪೊಲೀಸರ ಹತ್ಯೆಗೆ ಯತ್ನಿಸಿದ್ದು ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಆ.5ರಂದು ಮುಂಜಾನೆ ಹೆಜಮಾಡಿ ಟೋಲ್ ಗೇಟ್ ಬಳಿ ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರೊಂದನ್ನು ತಡೆದು ಪರಿಶೀಲಿಸಿದಾಗ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದು ತಿಳಿದುಬಂದಿದೆ.

ಈ ಸಂದರ್ಭ ಕಾರಿನ ಚಾಲಕ ಪೊಲೀಸರಿಗೆ ಅವಾಚ್ಯವಾಗಿ ಬೈದು ಅವರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳು ಪೊಲೀಸರನ್ನು ಗಾಯಗೊಳಿಸಿ ಪರಾರಿಯಾಗಿದ್ದರು. ಇದೀಗ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



