ಪುತ್ತೂರು: ಪಂಚ ಗ್ಯಾರಂಟಿಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜೀವನ ಮಟ್ಟ ಸುಧಾರಣೆಯೇ ಗ್ಯಾರಂಟಿ ಯೋಜನೆಯ ಮೂಲ ಉದ್ದೇಶವಾಗಿದೆ. ಸರ್ಕಾರದ ಈ ಯೋಜನೆಯನ್ನು ಮಾದರಿಯಾಗಿ ಬಳಸಿಕೊಂಡು ಮುಂದುವರಿಯಬೇಕು ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದರು.
ಪುತ್ತೂರು ತಾಲೂಕು ಪಂಚಾಯತ್ ಕಿರು ಸಭಾಂಗಣದಲ್ಲಿ ನಡೆದ ಯುವನಿಧಿ ಯೋಜನೆಯು ಫಲಾನುಭವಿಗಳ ದಾಖಲೆ ಪರಿಶೀಲನೆ ಮತ್ತು ಹೊಸ ಅರ್ಜಿಗಳ ನೋಂದಣಿ ಶಿಬಿರದಲ್ಲಿ ಮಾತನಾಡಿದ ಅವರು ಪುತ್ತೂರು ತಾಲೂಕಿನಲ್ಲಿ ಯುವನಿಧಿ ಯೋಜನೆಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ 475 ಮಂದಿ ಹಾಗೂ 2ನೇ ಹಂತದಲ್ಲಿ225 ಮಂದಿ ಫಲಾನುಭವಿಗಳಾಗಿದ್ದಾರೆ.

ಇನ್ನೂ ಹಲವಾರು ಯುವಕ ಯುವತಿಯರು ನೋಂದಾಯಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಈಗಾಗಲೇ ಫಲಾನುಭವಿಗಳಾದವರು ಅವರಿಗೆ ಮಾಹಿತಿ ನೀಡಿ ನಿಮ್ಮೊಂದಿಗೆ ಅವರನ್ನೂ ಬೆಳೆಸುವ ಕೆಲಸ ಮಾಡಬೇಕು ಎಂದರು.ಈ ಯೋಜನೆಯಲ್ಲಿ ಮೊದಲಿಗೆ ತಿಂಗಳಿಗೊಮ್ಮೆ ಸ್ವಯಂ ಘೋಷಣೆ(ಸೆಲ್ಫ್ ಡಿಕ್ಲರೇಶನ್) ಮಾಡಬೇಕಿತ್ತು. ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ ಎಂಬ ನಿಟ್ಟಿನಲ್ಲಿ ಇದೀಗ ಸರ್ಕಾರ 3 ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡುವಂತೆ ಬದಲಾವಣೆ ಮಾಡಲಾಗಿದೆ.

ಪ್ರಸ್ತುತ ಅಗಸ್ಟ್ ತಿಂಗಳಿನಲ್ಲ ಪ್ರತಿಯೊಬ್ಬರೂ ಈ ಘೋಷಣೆ ಮಾಡಿಕೊಳ್ಳ ಬೇಕು ಎಂದ ಅವರು ಮುಂದಿನ ದಿನಗಳಲ್ಲಿ ಯುವನಿಧಿ ಫಲಾನುಭವಿಗಳು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಪಂಚಾಯಿತಿಯಿಂದ ಕೌಶಲ್ಯ ತರಬೇತಿಯನ್ನು ಹಮ್ಮಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ. ಕೌಶಲ್ಯ ತರಬೇತಿಯು ಸ್ವ ಉದ್ಯೋಗಕ್ಕೆ ಪ್ರೇರಣೆಯಾಗಲಿದೆ. ಪುತ್ತೂರಿನಲ್ಲಿಯೂ ಕೌಶಲ್ಯ ತರಬೇತಿ ಹಮ್ಮಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ದಯಾನಂದ ಅವರು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ಮತ್ತು ಸ್ವಯಂ ಘೋಷಣೆ ಮಾಡುವ ಕುರಿತು ಮಾಹಿತಿ ನೀಡಿದರು. ಇದೆ ಸಂದರ್ಭದಲ್ಲಿ ಯುವನಿಧಿ ಯೋಜನೆಯು ಫಲಾನುಭವಿಗಳು ತಮ್ಮ ತಮ್ಮ ಪ್ರಯೋಜನವನ್ನು ತಿಳಿಸಿದರು.

ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬು ನವಗ್ರಾಮ, ಸೇಸಪ್ಪ ನೆಕ್ಕಿಲು, ಧೀರಜ್ ಗೌಡ ಮತ್ತು ತಾರಾನಾಥ ನುಳಿಯಾಲು,ತಾಲೂಕು ಎನ್ಆರ್ಎಲ್ಎಂ ಸಂಯೋಜಕ ಭರತ್ರಾಜ್ ಉಪಸ್ಥಿತರಿದ್ದರು.


