Breaking
23 Mar 2026, Mon

ಮೀನುಗಾರಿಕೆಗೆ ತೆರಳುತ್ತಿದ್ದ ದೋಣಿ ಪಲ್ಟಿ: ಅದೃಷ್ಟವಶಾತ್ ಒಂಬತ್ತು ಮೀನುಗಾರರು ಪಾರು

ಬೈಂದೂರು: ಮೀನುಗಾರಿಕೆಗೆ ತೆರಳುತ್ತಿದ್ದ ದೋಣಿಯೊಂದು ಮಗುಚಿಬಿದ್ದಿದ್ದು, ಅದೃಷ್ಟವಶಾತ್ ಒಂಬತ್ತು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಬೈಂದೂರಿನ ಉಪ್ಪುಂದದಲ್ಲಿ ಭಾನುವಾರ ನಡೆದಿದೆ.

ಪಾರಾದ ಮೀನುಗಾರರನ್ನು ಪ್ರಜ್ವಲ್ ಖಾರ್ವಿ, ಪ್ರಮೋದ್ ಖಾರ್ವಿ, ಗೌತಮ್ ಖಾರ್ವಿ, ಭಾಸ್ಕರ್ ಖಾರ್ವಿ, ಯೋಗಿರಾಜ್ ಖಾರ್ವಿ, ಗೋವಿಂದ ಖಾರ್ವಿ, ಬಾಬು ಖಾರ್ವಿ ಮತ್ತು ದೀಪಕ್ ಖಾರ್ವಿ ಎಂದು ಗುರುತಿಸಲಾಗಿದೆ.

ಈ ವೇಳೆ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಹಗ್ಗ ಮತ್ತು ಮತ್ತೊಂದು ದೋಣಿಯ ಸಹಾಯದಿಂದ ಮಗುಚಿ ಬಿದ್ದಿದ್ದ ದೋಣಿಯನ್ನು ಸಮುದ್ರ ಪಾಲಾಗದಂತೆ ತಡೆದು, ದಡಕ್ಕೆ ಎಳೆದು ತಂದಿದ್ದಾರೆ.

ಶಾರದಾ ಅವರಿಗೆ ಸೇರಿದ ಮೀನುಗಾರಿಕೆ ದೋಣಿಯಲ್ಲಿ ಒಂಬತ್ತು ಮಂದಿ ಮೀನುಗಾರರು ಉಪ್ಪುಂದ ಗ್ರಾಮದ ಮಡಿಕಲ್ ಕಡಲ ತೀರದಲ್ಲಿ ಸಮುದ್ರಕ್ಕೆ ತೆರಳುತ್ತಿದ್ದರು.

ಈ ವೇಳೆ ಉಪ್ಪುಂದ ಮಡಿಕಲ್ ತೀರದಿಂದ ಸುಮಾರು 10 ಮೈಲುಗಳಷ್ಟು ಸಾಗುವ ಹೊತ್ತಿನಲ್ಲಿ ಬೃಹತ್ ಅಲೆ ಅಪ್ಪಳಿಸಿ ಈ ಅವಘಡ ಸಂಭವಿಸಿದೆ. ಪರಿಣಾಮ ದೋಣಿ ಮಗುಚಿ ಅದರಲ್ಲಿದ್ದವರೆಲ್ಲರೂ ಸಮುದ್ರಕ್ಕೆ ಬಿದ್ದಿದ್ದು, ಈಜುತ್ತಾ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಘಟನೆಯಲ್ಲಿ ದೋಣಿಯ ಇಂಜಿನ್ ಮತ್ತು ಅದರ ರಚನೆಗೆ ಹಾನಿಯಾಗಿದೆ. ದೋಣಿಯಲ್ಲಿದ್ದ ಮೀನುಗಾರಿಕೆ ಬಲೆಗಳು ಸಮುದ್ರ ಪಾಲಾಗಿದ್ದು, ಸುಮಾರು 5.5 ಲಕ್ಷ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಅಲೆಗಳ ತೀವ್ರ ಹೆಚ್ಚಳ, ಗಾಳಿಯ ಒತ್ತಡ, ನೀರಿನ ರಭಸದ ಬಗ್ಗೆ ಅನುಮಾನ ಉಂಟಾದ ಹಿನ್ನಲೆ ಮೀನುಗಾರರಿಗೆ ಆರಂಭದಲ್ಲೇ ಲೈಫ್ ಜಾಕೆಟ್ ಧರಿಸಲು ಸೂಚನೆ ನೀಡಲಾಗಿತ್ತು.

ಮೀನುಗಾಗರೆಲ್ಲರೂ ಲೈಫ್ ಜಾಕೆಟ್ ಧರಿಸಿದ ಹಿನ್ನೆಲೆ ಎಲ್ಲಾ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *