ಬಂಟ್ವಾಳ :ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ 445.45 ಕೋಟಿ ವ್ಯವಹಾರ ನಡೆಸಿದ್ದು , 1.68 ಕೋಟಿ ಲಾಭಾಂಶ ಗಳಿಸಿದ್ದು , ಸಂಘದ ಸದಸ್ಯರಿಗೆ ಶೇ 12 ರಷ್ಟು ಲಾಭಾಂಶ ನೀಡಲಾಗುವುದೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.
ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ 2023-24 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಸಂಘದಲ್ಲಿ 5240 ‘ಎ’ ತರಗತಿ ಸದಸ್ಯರು , 1866 ‘ಡಿ ‘ ತರಗತಿ ಸದಸ್ಯರು ಸೇರಿದಂತೆ ಒಟ್ಟು 7106 ಸದಸ್ಯರನ್ನು ಹೊಂದಿದ್ದು,ವರದಿ ವರ್ಷದಲ್ಲಿ 1547 ಮಂದಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 34.55 ಕೋಟಿ ಸಾಲವನ್ನು ಮಂಗಳಾ ಕಿಸಾನ್ ಕಾರ್ಡ್ ಮೂಲಕ ವಿತರಿಸಲಾಗಿದ್ದು, ಶೇ 3 ಬಡ್ಡಿದರದಲ್ಲಿ ಕೃಷಿ ಅಭಿವೃದ್ದಿಗಾಗಿ 243 ಮಂದಿ ರೈತರಿಗೆ 7 ಕೋಟಿ ಸಾಲ ನೀಡಲಾಗಿದೆ . ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಸುಗಳ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 2.59 ಕೋಟಿ ನೀಡಲಾಗಿದೆ.
ಜಮೀನು ಅಡಮಾನ ಸಾಲ ಮತ್ತು ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 10.80 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟಿನಲ್ಲಿ 2194 ಸದಸ್ಯರಿಗೆ 55 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.ಸಂಘವು ನಿರಂತರವಾಗಿ ಪ್ರಗತಿ ಸಾಧಿಸಿದ್ದಕ್ಕಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮೆಚ್ಚುಗೆ ವ್ಯಕ್ತ ಪಡಿಸಿದೆ . ಸತತವಾಗಿ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾಗಿದೆ.2023-24 ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯನ್ವಯ 449 ಕುಟುಂಬಗಳ 1486 ಸದಸ್ಯರು ನೋಂದಣಿ ಮಾಡಿಸಲಾಗಿದ್ದು,ಒಟ್ಟು 2.70 ಲಕ್ಷ ಪ್ರೀಮಿಯಂ ಮೊತ್ತವನ್ನು ಸರಕಾರಕ್ಕೆ ಪಾವತಿಸಲಾಗಿದೆ.ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಗ್ರೇಡ್ ಬಂದಿದ್ದು,ಶೇ 98 ಸಾಲ ವಸೂಲಾತಿ ಪ್ರಗತಿ ಸಾಧಿಸಲಾಗಿದ್ದು , ಪ್ರಸಕ್ತ ಸಾಲಿನಲ್ಲಿ ಶೆ 100 ಸಾಲ ವಸೂಲಾತಿ ಸಾಧಿಸುವಲ್ಲಿ ಸದಸ್ಯರು ಸಹಕಾರ ನೀಡಬೇಕೆಂದರು.
ನಿವೃತ್ತ ಯೋಧರಿಗೆ ಗೌರವರ್ಪಣೆ:ರಾಷ್ಟ್ರ ಸೇವೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತಿಗೊಂಡು ಕೃಷಿಯಲ್ಲಿ ತೊಡಗಿಸಿಕೊಂಡ ರಾಜು ಪೂಜಾರಿ ಹಲಾಯಿ, ದಯಾನಂದ ಶೆಟ್ಟಿ,ಮೋಹನ್ ಜಿ ಮೂಲ್ಯರವರನ್ನು ಗೌರವಿಸಲಾಯಿತು.
ನುಡಿ ನಮನ:ಸಂಘದಲ್ಲಿ ಸದಸ್ಯರಾಗಿದ್ದು,ಮರಣ ಹೊಂದಿದ 36 ಸದಸ್ಯರಿಗೆ ಮಹಾಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು.ಸಂಘದ ವ್ಯಾಪ್ತಿಯ ನಿರುದ್ಯೋಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುವ ಉದ್ದೇಶದಿಂದ ಸ್ವಾವಲಂಬನೆ ಬದುಕು ನಿರ್ವಹಿಸಲು ಪ್ರೋತ್ಸಾಹ ನೀಡುವ ಹಿನ್ನಲೆಯಲ್ಲಿಸುಮಾರು 60 ಮಂದಿ ಮಹಿಳೆಯರಿಗೆ ಉಚಿತ ಮಂಗಳೂರು ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಸಹಯೋಗದಲ್ಲಿ “ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ “ತರಬೇತಿಯನ್ನು ರೋಟರಿ ಕ್ಲಬ್ಗಳ ಸಹಯೋಗದಲ್ಲಿ ಸಂಘದ ಸಭಾಂಗಣದಲ್ಲಿ ಸಂಘದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ.
ಶಾಖೆಗಳು:ಪ್ರಧಾನ ಕಛೇರಿ ಸೇರಿದಂತೆ ರಾಯಿ ,ಆರಂಬೋಡಿ,ಮಾವಿನ ಕಟ್ಟೆ ಶಾಖೆಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು,ಸದಸ್ಯರ ಪ್ರತಿಕ್ರಿಯೆ ಧನಾತ್ಮಕವಾಗಿ ಲಾಭದತ್ತ ಸಾಗುತ್ತಿದೆ.
ಪಡಿತರ ವ್ಯವಸ್ಥೆ:ಕೃಷಿ ಇಲಾಖೆ ವತಿಯಿಂದ ಸಹಾಯ ಧನದಲ್ಲಿ ಸಂಘದ ವತಿಯಿಂದ ಎರಡು ಟ್ರಾಕ್ಟರ್ ಗಳನ್ನು ಖರೀದಿಸಿ ಭತ್ತ ಬೇಸಾಯ ಮಾಡುವ ರೈತರಿಗೆ ಉಳುಮೆ ಮಾಡಲು ಯೋಗ್ಯ ಬಾಡಿಗೆ ದರದಲ್ಲಿ ನೀಡಲಾಗುತ್ತಿದೆ. ಸಂಘದ ವತಿಯಿಂದ ಪಡಿತರ ವ್ಯವಸ್ಥೆ ವಿತರಣೆ ಮಾಡಲಾಗುತ್ತಿದ್ದು,ಕೃಷಿ ಔಷಧಿಗಳು,ರಾಸಾಯನಿಕ ಮತ್ತು ಸಾವಯವ ಗೊಬ್ಬರ ಇತ್ಯಾದಿಗಳ ಮಾರಾಟ ಸೌಲಭ್ಯಗಳನ್ನು ಸಂಘವು ನೀಡುತ್ತಿದೆ.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ,ನಿರ್ದೇಶಕರಾದ ಪದ್ಮರಾಜ್ ಬಲ್ಲಾಳ್ ಮವಂತೂರು,ಸಂದೇಶ್ ಶೆಟ್ಟಿ ಪೊಡುಂಬ,ರಾಜೇಶ್ ಶೆಟ್ಟಿ ಕೊನೆರಬೆಟ್ಟು,ದಿನೇಶ್ ಪೂಜಾರಿ ಹುಲಿಮೇರು,ವೀರಪ್ಪ ಪರವ, ಜಾರಪ್ಪ ನಾಯ್ಕ,ಉಮೇಶ್ ಗೌಡ,ದೇವರಾಜ್ ಸಾಲ್ಯಾನ್,ಶ್ರೀಮತಿ ಅರುಣಾ ಶೆಟ್ಟಿ,ಶ್ರೀಮತಿ ಮಂದರಾತಿ ಎಸ್ ಶೆಟ್ಟಿ,ವೃತ್ತಿ ಪರ ನಿರ್ದೇಶಕರಾದ ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಗೋಪಿನಾಥ ರೈ,ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ರತ್ನಕುಮಾರ್ ಚೌಟ,ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಹುಲಿಮೇರು , ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರ್,ಪ್ರಮುಖರಾದ ರಶ್ಮಿತ್ ಶೆಟ್ಟಿ,ಸಂದೀಪ್ ಶೆಟ್ಟಿ ಪೊಡುಂಬ, ಲಕ್ಷ್ಮೀಧರ ಶೆಟ್ಟಿ,ನಾರಯಣ ನಾಯಕ್ ಕರ್ಪೆ,ಜಯರಾಮ ಅಡಪ ,ಕಿರಣ್ ಮಂಜಿಲ ,ರಾಜೇಶ್ ಶೆಟ್ಟಿ ಸೀತಾಳ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಪ್ರಸ್ತಾಪಿಸಿ,ಸಮಗ್ರ ಆಯ -ವ್ಯಯ ಮಂಡಿಸಿದರು. ಸಂಘದ ನಿರ್ದೇಶಕ ಹರೀಶ್ ಆಚಾರ್ಯ ಸ್ವಾಗತಿಸಿ, , ನಿರ್ದೇಶಕಿ ಮಂದಾರತಿ ಎಸ್ ಶೆಟ್ಟಿ ಧನ್ಯವಾದವಿತ್ತರು.ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.