Breaking
20 Sep 2026, Sun

ಉಳ್ಳಾಲ: ಕಾಲುಸಂಕದಿಂದ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿ ಶವ ಪತ್ತೆ

ಉಳ್ಳಾಲ: ಪಿಲಾರು ಬಳಿ ಹೊಳೆ ದಾಟುವ ಸಂದರ್ಭ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನ ಮೃತದೇಹ ಜುಲೈ 18ರಂದು ಸೋಮೇಶ್ವರ ಉಚ್ಚಿಲದ ಹೊಳೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲನಿಯ ನಿವಾಸಿ ಕೇಶವ ಶೆಟ್ಟಿ (64) ಎಂದು ಗುರುತಿಸಲಾಗಿದೆ.

ಜು. 17ರಂದು ಬುಧವಾರ ಸಂಜೆ 7 ಗಂಟೆ ವೇಳೆಗೆ ಕೇಶವ ಅವರು ಕೆಲಸ ಮುಗಿಸಿ ಪಿಲಾರು ರಸ್ತೆಯಾಗಿ ಮನೆಗೆ ಮರಳುತ್ತಿದ್ದಾಗ ಪಿಲಾರುವಿನ ರಾಜಕಾಲುವೆಯ ಕಾಲುಸಂಕ ದಾಟುತ್ತಿದ್ದ ವೇಳೆ ನೀರುಪಾಲಾಗಿದ್ದು, ಮನೆಮಂದಿ, ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ, ಕೇಶವ ಅವರು ಸಿಕ್ಕಿರಲಿಲ್ಲ.

ಜುಲೈ 18ರಂದು ಮಧ್ಯಾಹ್ನ ಉಚ್ಚಿಲದ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್ ಮತ್ತು ಸೋಮೇಶ್ವರ ಮುಖ್ಯಾಧಿಕಾರಿ ಮತ್ತಡಿ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು, ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *